ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಳಸಕೊಪ್ಪ ಗ್ರಾಮದ ಉರಗರಕ್ಷಕ ಸದಾಶಿವ ಕರಣಿ(30) ಹಾವು ಕಚ್ಚಿ ಮೃತಪಟ್ಟಿದ್ದಾರೆ.
ಬಾದಾಮಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುತ್ತಿದ್ದರು. ಈ ಭಾಗದ ನಿವಾಸಿಗಳು ಹಾವು ಕಂಡರೆ ಸದಾಶಿವ ಅವರಿಗೆ ಕರೆ ಮಾಡುತ್ತಿದ್ದರು. ಕಳಸಕೊಪ್ಪದ ಜಮೀನಿನಲ್ಲಿ ಬುಧವಾರ ಮಧ್ಯಾಹ್ನ ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಅವರಿಗೆ ನಾಗರಹಾವು ಕಚ್ಚಿದೆ. ಇದರಿಂದಾಗಿ ಅಸ್ವಸ್ಥರಾಗಿದ್ದ ಅವರು ತಾವೇ ಗಿಡಮೂಲಿಕೆ ಔಷಧ ತಯಾರಿಸಿ ಕುಡಿದಿದ್ದಾರೆ. ಆದರೆ, ತಡರಾತ್ರಿ ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.