ರಣಹದ್ದುಗಳನ್ನ ಕಾನೂನು ಬಾಹಿರವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಸ್ಮಗ್ಲರ್ ಓರ್ವನನ್ನ ಮಧ್ಯಪ್ರದೇಶದ ಖಾಂಡ್ವಾ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅಳಿವಿನಂಚಿನಲ್ಲಿರುವ ಜಾತಿಯ ಏಳು ರಣಹದ್ದುಗಳನ್ನ ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ.
ಈತನೊಂದಿಗೆ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ದುರ್ವಾಸನೆ ಬಂದ ಕಾರಣ ಟಿಕೆಟ್ ಪರಿವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ರೈಲು ಖಾಂಡ್ವಾ ರೈಲು ನಿಲ್ದಾಣಕ್ಕೆ ಬಂದ ತಕ್ಷಣ, ಟಿಕೆಟ್ ಪರಿವೀಕ್ಷಕರು ಆರ್ಪಿಎಫ್ಗೆ ಮಾಹಿತಿ ನೀಡಿದ್ದಾರೆ. ಖಾಂಡ್ವಾ ರೈಲು ನಿಲ್ದಾಣದಲ್ಲಿ ಆರ್ಪಿಎಫ್ ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ರಣಹದ್ದುಗಳು ಅಪರೂಪದ ಜಾತಿಯ ಈಜಿಪ್ಟ್ ರಣಹದ್ದು ಎಂದು ವರದಿಯಾಗಿದೆ.
ರೈಲಿನಲ್ಲಿ ವ್ಯಕ್ತಿಯೊಬ್ಬ ಬಿಳಿ ರಣಹದ್ದುಗಳನ್ನು ಹೊತ್ತೊಯ್ಯುತ್ತಿದ್ದ ಬಗ್ಗೆ ಆರ್ಪಿಎಫ್ನಿಂದ ನಮಗೆ ಮಾಹಿತಿ ಸಿಕ್ಕಿತು. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ರೈಲು ನಿಲ್ದಾಣಕ್ಕೆ ಹೋಗಿ, ರೈಲ್ವೇ ಪೊಲೀಸ್ ಪಡೆಯೊಂದಿಗೆ ಜಂಟಿಯಾಗಿ ರೈಲಿನ ಮೇಲೆ ದಾಳಿ ನಡೆಸಿದರು. ಆರೋಪಿ ಫರೀದ್ ಅಹ್ಮದ್ನಿಂದ ಏಳು ಬಿಳಿ ರಣಹದ್ದುಗಳನ್ನ ವಶಪಡಿಸಿಕೊಂಡು ಬಂಧಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಧ್ಯ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ರಣಹದ್ದುಗಳನ್ನು ಬಯಲಿಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆಯ ಎಸ್ಡಿಒ ಆರ್.ಎಸ್. ಸೋಲಂಕಿ ತಿಳಿಸಿದ್ದಾರೆ.
ಯುಪಿಯ ಕಾನ್ಪುರದಿಂದ ಮಹಾರಾಷ್ಟ್ರದ ಮಾಲೆಗಾಂವ್ಗೆ ರಣಹದ್ದುಗಳನ್ನು ಕೊಂಡೊಯ್ಯಲಾಗುತ್ತಿತ್ತು. ಮಧ್ಯಪ್ರದೇಶದಲ್ಲಿ ರಣಹದ್ದುಗಳ ಕಳ್ಳಸಾಗಣೆ ನಡೆದಿರುವ ಮೊದಲ ಪ್ರಕರಣ ಇದಾಗಿದೆ. ಎಲ್ಲಾ ರಣಹದ್ದುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.