ಕಳ್ಳಸಾಗಾಟದ ವೇಳೆ ಜಪ್ತಿ ಮಾಡಲಾಗುವ ಚಿನ್ನದ ಮೊತ್ತವು 2022ರಲ್ಲಿ 47% ನಷ್ಟು ಹೆಚ್ಚಳ ಕಂಡಿದೆ. 2021ರಲ್ಲಿ ಸರ್ಕಾರವು 2,383.38 ಕೆಜಿ ಚಿನ್ನವನ್ನು ಕಳ್ಳಸಾಗಾಟಗಾರರಿಂದ ವಶಕ್ಕೆ ಪಡೆದರೆ, 2020ರಲ್ಲಿ 2,154.58 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿತ್ತು.
2023ರ ಮೊದಲ ಎರಡು ತಿಂಗಳಲ್ಲಿ 916.37 ಕೆಜಿಯಷ್ಟು ಚಿನ್ನವನ್ನು ಕಳ್ಳಸಾಗಾಟಗಾರರಿಂದ ಕಾನೂನು ಪಾಲನಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ. ಈ ವಿಚಾರವಾಗಿ ಕಸ್ಟಮ್ಸ್ ಸಿಬ್ಬಂದಿ ಹಾಗೂ ಕಂದಾಯ ಗುಪ್ತಚರ ನಿರ್ದೇಶನಾಲಯದ ಸಿಬ್ಬಂದಿ ನಿರಂತರ ಕಣ್ಗಾವಲಿನಲ್ಲಿದ್ದು, ಪ್ರಯಾಣಿಕರು ಹಾಗೂ ಸರಕುಗಳ ಸಾಗಾಟದ ಮೇಲೆ ತೀವ್ರ ನಿಗಾ ವಹಿಸುತ್ತಿದ್ದಾರೆ ಎಂದು ರಾಜ್ಯಸಭೆಗೆ ನೀಡಲಾದ ಉತ್ತರವೊಂದರಲ್ಲಿ ತಿಳಿಸಲಾಗಿದೆ.
ಚಿನ್ನ ಕಳ್ಳಸಾಗಾಟಕ್ಕೆ ಕಳ್ಳರು ಅಳವಡಿಸಿಕೊಳ್ಳುವ ಹೊಸ ವಿಧಗಳ ಕುರಿತಾಗಿ ಕಾನೂನು ಪಾಲನಾ ಪಡೆಗಳು ಜಾಗೃತವಾಗಿದ್ದು, ಇನ್ನಷ್ಟು ಕಟ್ಟೆಚ್ಚರದ ಸ್ಥಿತಿಯಲ್ಲಿವೆ ಎಂದು ಇದೇ ವೇಳೆ ತಿಳಿಸಲಾಗಿದೆ.
ಕೇರಳ ಒಂದರಲ್ಲೇ 2022ರಲ್ಲಿ 3,982 ಪ್ರಕರಣಗಳನ್ನು ಭೇದಿಸಿದ್ದು, 755.81 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ. ಮಿಕ್ಕಂತೆ ಮಹಾರಾಷ್ಟ್ರದಲ್ಲಿ 535.65 ಕೆಜಿ, ತಮಿಳುನಾಡಿನಲ್ಲಿ 519 ಕೆಜಿಯಷ್ಟು ಚಿನ್ನವನ್ನು ಕಳ್ಳಸಾಗಾಟಗಾರರಿಂದ ವಶಕ್ಕೆ ಪಡೆಯಲಾಗಿದೆ.
ದೆಹಲಿ, ಹರಿಯಾಣಾ, ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ, ಚಂಡೀಘಡ, ಜಮ್ಮು & ಕಾಶ್ಮೀರ, ಲೆಹ್ ಮತ್ತು ಲಡಾಖ್‌ಗಳಲ್ಲಿ ಒಟ್ಟಾರೆ 556.69 ಕೆಜಿಯಷ್ಟು ಚಿನ್ನವನ್ನು ಹೀಗೆ ವಶಕ್ಕೆ ಪಡೆಯಲಾಗಿದೆ.
ಚೀನಾ ಬಿಟ್ಟರೆ ಜಗತ್ತಿನ ಅತಿ ದೊಡ್ಡ ಚಿನ್ನದ ಬಳಕೆದಾರನಾಗಿರುವ ಭಾರತದಲ್ಲಿ ಹಳದಿ ಲೋಹಕ್ಕೆ ಇರುವ ಭಾರೀ ಬೇಡಿಕೆ ಹಾಗೂ ಭಾರೀ ಮೌಲ್ಯದ ಆಮದು ಸುಂಕಗಳ ಕಾರಣದಿಂದ ಚಿನ್ನದ ಕಳ್ಳಸಾಗಾಟದ ಪ್ರಕರಣಗಳೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿವೆ. ಆಮದು ಮಾಡಿಕೊಳ್ಳಲಾಗುವ ಚಿನ್ನದ ಮೇಲೆ 18.5%ನಷ್ಟು ಸುಂಕ ಬೀಳುತ್ತದೆ.
ಭಾರೀ ಬೇಡಿಕೆ ಇದ್ದರೂ ಸಹ ಭಾರತ ತನ್ನ ಚಿನ್ನದ ಅಗತ್ಯದ ಬಹುತೇಕ ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತಿದೆ.