ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗುವ ಮುನ್ನ ಮಾಡೆಲ್ ಆಗಿ ತಮ್ಮ ವೃತ್ತಿ ಬದುಕು ಆರಂಭಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಏಕ್ತಾ ಕಪೂರ್‌ರ ’ಕ್ಯೂಂಕೀ ಸಾಸ್ ಭೀ ಕಭಿ ಬಹೂ ಥೀ’ ಎಂಬ ಜನಪ್ರಿಯ ಧಾರಾವಾಹಿಯಲ್ಲಿ ತುಳಸಿ ವಿರಾಣಿ ಪಾತ್ರದಲ್ಲಿ ಭಾರೀ ಹೆಸರು ಮಾಡಿದ್ದರು.
ಪ್ರಖರ ವಾಕ್ಚತುರೆಯಾಗಿರುವ ಸ್ಮೃತಿ ಇರಾನಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಮಾರ್ಚ್ 23ರಂದು ಸ್ಮೃತಿ ಹುಟ್ಟುಹಬ್ಬವಿದ್ದು, ಆ ದಿನವೇ ಅವರ ಮಾಡೆಲಿಂಗ್ ದಿನಗಳ ವಿಡಿಯೋವೊಂದು ವೈರಲ್ ಆಗಿದೆ.
ಬೆಂಗಾಲಿ ತಾಯಿ, ಶಿಬಾನಿ ಬಾಗ್ಚೀ ಹಾಗೂ ಪಂಜಾಬೀ-ಮಹಾರಾಷ್ಟ್ರಿಯನ್ ತಂದೆ, ಅಜಯ್ ಕುಮಾರ್‌ರ ಮೂವರು ಪುತ್ರಿಯರ ಪೈಕಿ ಹಿರಿಯ ಪುತ್ರಿಯಾಗಿ ಜನಿಸಿದ ಸ್ಮೃತಿ, 1998ರಲ್ಲಿ ಮಿಸ್ ಇಂಡಿಯಾ ಬ್ಯೂಟಿ ಸ್ಫರ್ಧೆಯಲ್ಲಿ ಭಾಗವಹಿಸಿದ್ದು, ರ‍್ಯಾಂಪ್ ಮೇಲೆ ವಾಕ್ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಆದರೆ ಸ್ಪರ್ಧೆಯ ಅಂತಿಮ ಒಂಬತ್ತರಲ್ಲಿ ಒಬ್ಬರಾಗಲು ವಿಫಲರಾದ ಬಳಿಕ ಅದೇ ವರ್ಷದಲ್ಲಿ ಸ್ಮೃತಿ ’ಸಾವನ್ ಮೇಯ್ನ್ ಲಗ್ ಗಯೀ ಆಗ್’ ಆಲ್ಬಂನ ’ಬೋಲಿಯಾನ್’ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
2003ರಲ್ಲಿ ಬಿಜೆಪಿ ಸೇರಿದ ಸ್ಮೃತಿ ಇರಾನಿ, 2004ರಲ್ಲಿ ಮಹಾರಾಷ್ಟ್ರ ಯುವ ಬಿಜೆಪಿಯ ಅಧ್ಯಕ್ಷರಾಗಿ ನೇಮಕಗೊಂಡರು. 2019ರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಸೋಲಿಸಿದ್ದ ಸ್ಮೃತಿ ಅಮೇಥಿಯಿಂದ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.
2000 ರಲ್ಲಿ ಟಿವಿ ಧಾರಾವಾಹಿಗೆ ಪಾದಾರ್ಪಣೆ ಮಾಡಿದ ಸ್ಮೃತಿ, ’ಆತಿಶ್’ ಮತ್ಮತು ’ಹಮ್ ಹೈಂ ಕಲ್ ಆಜ್ ಔರ್ ಕಲ್’ ಧಾರಾವಾಹಿಯಲ್ಲಿ ನಟಿಸಿದ್ದರು. ಡಿಡಿ ಮೆಟ್ರೋ ಕವಿತಾ ಧಾರಾವಾಹಿಯಲ್ಲೂ ಸ್ಮೃತಿ ಪಾತ್ರ ನಿಭಾಯಿಸಿದ್ದಾರೆ.