ನವದೆಹಲಿ: ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿಸೋಜಾ ಇತರರು ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಪುತ್ರಿ ಮೇಲೆ ವೈಯಕ್ತಿಕ ಸುಳ್ಳು ಆರೋಪದ ಸಂಚು ರೂಪಿಸಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಸ್ಮೃತಿ ಇರಾನಿ ಮತ್ತು ಅವರ ಮಗಳು ಗೋವಾದ ರೆಸ್ಟೋರೆಂಟ್ ನ ಮಾಲೀಕರೂ ಅಲ್ಲ ಅಥವಾ ಅವರು ಆರೋಪಿಸಿದಂತೆ ಬಾರ್ ಅಂಡ್ ರೆಸ್ಟೊರೆಂಟ್ ಗಾಗಿ ಪರವಾನಗಿಗಾಗಿ ಅರ್ಜಿಯನ್ನೂ ಸಲ್ಲಿಸಿಲ್ಲ ಎಂದು ಹೇಳಲಾಗಿದೆ.
ಇರಾನಿ ಅವರನ್ನು ಉದ್ದೇಶಪೂರ್ವಕವಾಗಿ ಸಾರ್ವಜನಿಕ ನಿಂದನೆಗೆ ಒಳಪಡಿಸಲು, ನೈತಿಕ ಚಾರಿತ್ರ್ಯಹರಣ, ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತರಲು ಕಾಂಗ್ರೆಸ್ ನ ಮೂವರು ನಾಯಕರು ದುರುದ್ದೇಶಪೂರಿತ ಹೇಳಿಕೆ ನೀಡಿದಂತಿದೆ ಎಂದು ಹೈಕೋರ್ಟ್ ಹೇಳಿದೆ.
ಮೂವರು ಕಾಂಗ್ರೆಸ್ ನಾಯಕರ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ಅವರು ಸಲ್ಲಿಸಿರುವ ಸಿವಿಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಹೈಕೋರ್ಟ್ ತನ್ನ ಮುಂದೆ ಇರಿಸಲಾದ ದಾಖಲೆಗಳನ್ನು ಪರಿಶೀಲಿಸಿದಾಗ ಈ ಟೀಕೆಗಳನ್ನು ಮಾಡಿದೆ.
ಸಿವಿಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮೂವರು ಕಾಂಗ್ರೆಸ್ ನಾಯಕರಿಗೆ ಜುಲೈ 29 ರಂದು ಸಮನ್ಸ್ ಜಾರಿಗೊಳಿಸಿದ್ದ ಹೈಕೋರ್ಟ್ ನ ಆದೇಶವನ್ನು ಸೋಮವಾರ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಕೇಂದ್ರ ಸಚಿವರು ಮತ್ತು ಅವರ ಮಗಳ ವಿರುದ್ಧದ ಆರೋಪಗಳ ಕುರಿತು ಟ್ವೀಟ್‌ಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ತೆಗೆದುಹಾಕುವಂತೆಯೂ ಹೈಕೋರ್ಟ್ ತಿಳಿಸಿದೆ.
ಗೋವಾ ಸರ್ಕಾರ, ಅಬಕಾರಿ ಆಯುಕ್ತರ ಕಚೇರಿ ಹೊರಡಿಸಿದ ದಾಖಲೆಗಳನ್ನು ಪರಿಶಿಲಿಸಿದಾಗ ಫಿರ್ಯಾದಿ ಅಥವಾ ಅವರ ಮಗಳ ಪರವಾಗಿ ಯಾವುದೇ ಪರವಾನಗಿ ನೀಡಲಾಗಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಫಿರ್ಯಾದಿ ಅಥವಾ ಆಕೆಯ ಮಗಳು ರೆಸ್ಟೋರೆಂಟ್‌ನ ಮಾಲೀಕರಲ್ಲ. ಫಿರ್ಯಾದಿ ಅಥವಾ ಅವರ ಮಗಳು ಪರವಾನಗಿಗಾಗಿ ಎಂದಿಗೂ ಅರ್ಜಿ ಸಲ್ಲಿಸಿಲ್ಲ ಎಂದು ಸಾಬೀತಾಗಿದೆ.
ರೆಸ್ಟೊರೆಂಟ್ ಅಥವಾ ರೆಸ್ಟೋರೆಂಟ್ ಇರುವ ಜಮೀನು ಫಿರ್ಯಾದಿ ಅಥವಾ ಅವರ ಮಗಳ ಒಡೆತನದಲ್ಲಿರುವುದಿಲ್ಲ, ಗೋವಾ ಸರ್ಕಾರವು ನೀಡಿದ ಶೋಕಾಸ್ ನೋಟಿಸ್ ಕೂಡ ಫಿರ್ಯಾದಿ ಅಥವಾ ಅವರ ಮಗಳ ಹೆಸರಿನಲ್ಲಿಲ್ಲ. ಈ ಎಲ್ಲ ಅಂಶಗಳನ್ನು ಫಿರ್ಯಾದಿದಾರರು ಅಫಿಡವಿಟ್‌ನಲ್ಲಿ ದೃಢಪಡಿಸಿದ್ದಾರೆ ಎಂದು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ತಮ್ಮ 14 ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.
ತನ್ನ ಮತ್ತು ತನ್ನ 18 ವರ್ಷದ ಮಗಳ ವಿರುದ್ಧ ಆಧಾರರಹಿತ ಮತ್ತು ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಇರಾನಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.