ಮಹಾರಾಷ್ಟ್ರದ ಮುಂಬೈನ ಹಾಜಿ ಅಲಿಯಿಂದ ವರ್ಲಿ-ಬೌಂಡ್ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ಡಿಸ್ ಪ್ಲೇ ಬೋರ್ಡ್ ನಲ್ಲಿ ಕಂಡ ಸಂದೇಶಕ್ಕೆ ಗಲಿಬಿಲಿಗೊಂಡಿದ್ದಾರೆ.
ವಾಹನ ಚಾಲಕರು ಎಲ್ಇಡಿ ಡಿಸ್ಪ್ಲೇ ಬೋರ್ಡ್ನಲ್ಲಿ ‘ಸ್ಮೋಕ್ ವೀಡ್ ಎವೆರಿಡೇ’ ಎಂಬ ಸಂದೇಶ ಕಂಡು ಅವಕ್ಕಾದರು. ಆದರೆ ಇದು ತಾಂತ್ರಿಕ ದೋಷದಿಂದ ಉಂಟಾಗಿದೆ ಎಂದು ನಂತರ ತಿಳಿಸಲಾಗಿದೆ.
ಹಾಜಿ ಅಲಿ ದರ್ಗಾದಿಂದ ಸಿಟಿ ಬೇಕರಿ/ವರ್ಲಿ ನಾಕಾ ಜಂಕ್ಷನ್ ಕಡೆಗೆ ಪ್ರಾರಂಭವಾಗುವ ಜಂಕ್ಷನ್‌ನಿಂದ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿ, MCRP (ಮುಂಬೈ) ನಿರ್ಮಾಣದಲ್ಲಿ ತೊಡಗಿರುವ L&T (ಲಾರ್ಸೆನ್ ಮತ್ತು ಟೂಬ್ರೊ) ಸ್ಥಾಪಿಸಿರುವ LED ಪ್ರದರ್ಶನದಲ್ಲಿ ಸಂಜೆ ವೇಳೆ ‘ಸ್ಮೋಕ್ ವೀಡ್ ಎವೆರಿಡೇ’ ಎಂಬ ತಪ್ಪಾದ ಸಂದೇಶ ಕಂಡಿತ್ತು. ತಾಂತ್ರಿಕ ದೋಷದಿಂದ ತಪ್ಪು ಸಂದೇಶ ಕಂಡುಬಂದ ನಂತರ ಸಂಚಾರಿ ಅಧಿಕಾರಿಗಳು ಡಿಸ್ಪ್ಲೇ ಬೋರ್ಡ್ ಮುಚ್ಚಿದರು.
ಸಂಚಾರ ವಿಭಾಗದ ಜಂಟಿ ಆಯುಕ್ತ ಪ್ರವೀಣ್ ಪಡವಾಲ್ ಮಾತನಾಡಿ, ಎಲ್ ಆ್ಯಂಡ್ ಟಿ ಕಂಪನಿಯು ಉತ್ತರಕ್ಕೆ ಹಾಜಿ ಅಲಿಯಿಂದ ಲೋಟಸ್ ಜಂಕ್ಷನ್‌ವರೆಗೆ ಎಲ್‌ಇಡಿ ಡಿಸ್‌ಪ್ಲೇ ಬೋರ್ಡ್ ಅಳವಡಿಸಿದೆ. ಈ ಕುರಿತು ಎಲ್ ಆ್ಯಂಡ್‌ಟಿ ಎಂಜಿನಿಯರ್ ಠಾಕ್ರೆ ಅವರೊಂದಿಗೆ ಚರ್ಚಿಸಿದಾಗ, ಕೆಲವು ತಾಂತ್ರಿಕ ಕಾರಣಗಳಿಂದ ಹೀಗಾಗಿರುವುದಾಗಿ ಅವರು ಹೇಳಿದರು. ಡಿಸ್ಪ್ಲೇಯಲ್ಲಿ ತಪ್ಪು ಸಂದೇಶ ಬಂದ ನಂತರ ಅವರು ಐಟಿ ತಂಡವನ್ನು ಸಂಪರ್ಕಿಸಿದ್ದು ಅದನ್ನು ಸರಿಪಡಿಸುವವರೆಗೆ ಡಿಸ್ಪ್ಲೇ ಬೋರ್ಡ್ ಅನ್ನು ಮುಚ್ಚಲಾಗಿದೆ ಎಂದು ಹೇಳಿದರು.