ರಿವೋಲ್ಟ್ ಮೋಟಾರ್ಸ್ ಕಂಪನಿಯು ತನ್ನ ಎಲೆಕ್ಟ್ರಿಕ್ ಬೈಕುಗಳಿಗೆ ಸ್ಮಾರ್ಟ್ ಫೋನುಗಳನ್ನೇ ಬೈಕ್ ಕೀಯಾಗಿ ಬಳಕೆ ಮಾಡಬಹುದಾದ ಹೊಸ ವಿಧಾನವೊಂದನ್ನು ಆವಿಷ್ಕರಿಸಿದೆ.
ಸ್ಮಾರ್ಟ್ ಫೋನ್ಗಳಲ್ಲಿ ಮೈರಿವೋಲ್ಟ್ ಎಂಬ ಅಪ್ಲಿಕೇಶನ್ ನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ ಬೈಕ್ಗಳನ್ನು ಸ್ವಿಚ್ ಆಫ್ ಹಾಗೂ ಸ್ವಿಚ್ ಆನ್ ಮಾಡಬಹುದಾಗಿದೆ ಎಂದು ಕಂಪನಿ ಹೇಳಿದೆ. ಈ ಹೊಸ ಸೌಕರ್ಯವು ಸೆಪ್ಟೆಂಬರ್ ತಿಂಗಳಿನಿಂದ ಗ್ರಾಹಕರ ಬಳಕೆಗೆ ಸಿಗಲಿದೆ.
ರಿವೋಲ್ಟ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಗಳಲ್ಲಿ ಕೃತಕ ಇಂಟೆಲಿಜೆನ್ಸ್ ಹಾಗೂ ಅತ್ಯಾಧುನಿಕ ಕ್ಲೌಡ್ ಬೇಸ್ಡ್ ಸಾಫ್ಟ್ವೇರ್ ನ್ನು ಅಳವಡಿಸಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹದ್ದೊಂದು ಹೊಸ ಸೌಕರ್ಯ ಮೋಟಾರ್ ಸೈಕಲ್ ವಿಭಾಗಕ್ಕೆ ಕಾಲಿಟ್ಟಿದೆ ಎಂದು ಕಂಪನಿ ಹೇಳಿದೆ.
ಬೈಕ್ ಸ್ವಿಚ್ ಆನ್ ಇಲ್ಲವೇ ಆಫ್ ಮಾಡಲು ಬೈಕ್ ಸವಾರರು ಸ್ಮಾರ್ಟ್ ಫೋನ್ಗಳಲ್ಲಿ ಅಪ್ಲಿಕೇಶನ್ ನ್ನು ತೆರೆಯಬೇಕು ಹಾಗೂ ಅಪ್ಲಿಕೇಶನ್ನಲ್ಲಿರುವ ಪವರ್ ಬಟನ್ ನ್ನು ಎಡಕ್ಕೆ ಅಥವಾ ಬಲಕ್ಕೆ ತಳ್ಳಬೇಕು. ಈ ರೀತಿ ಅಪ್ಲಿಕೇಶನ್ನ ಸಹಾಯದಿಂದ ಬೈಕ್ ಸವಾರರಿಗೆ ಕೀಯನ್ನು ನೆನಪಿನಲ್ಲಿ ಇಡಬೇಕು ಎಂಬ ಅವಶ್ಯಕತೆ ಬೀಳೋದಿಲ್ಲ. ಅಲ್ಲದೇ ಜನಸಂದಣಿ ಇರುವ ಪ್ರದೇಶದಲ್ಲಿ ಬೈಕ್ ಹತ್ತಿರ ಹೋಗದೇ ಅದನ್ನು ಆನ್ ಇಲ್ಲವೇ ಆಫ್ ಮಾಡಬಹುದಾಗಿದೆ.
ಹೊಸ ರಿವೋಲ್ಟ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಈ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಅಲ್ಲದೇ ಈಗಾಗಲೇ ಆರ್ವಿ 400 ಬೈಕ್ ಹೊಂದಿರುವ ಗ್ರಾಹಕರು ಕೂಡ ಈ ಸೌಕರ್ಯವನ್ನು ಮುಂದಿನ ದಿನಗಳಲ್ಲಿ ಬಳಕೆ ಮಾಡಬಹುದಾಗಿದೆ.