ಬೆಂಗಳೂರು: ಕೊಳಚೆ ಪ್ರದೇಶ ನಿವಾಸಿಗಳಿಗೆ ಶೀಘ್ರವೇ ಕಾಯಂ ಹಕ್ಕುಪತ್ರ ವಿತರಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಜಮಿರ್ ಅಹಮ್ಮದ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಸರ್ಕಾರದ ಮಾಲೀಕತ್ವದಲ್ಲಿರುವ ಘೋಷಿತ ಕೊಳಚೆ ಪ್ರದೇಶದ ನಿವಾಸಿಗಳಿಗೆ ಶೀಘ್ರವೇ ಕಾಯಂ ಹಕ್ಕುಪತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ನಿಗಮದ ಮೂಲಕ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 1200 ಚದರ ಅಡಿ, ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 600 ಚದರ ಅಡಿಗೆ ಮೀರದಂತೆ ಹಕ್ಕುಪತ್ರ ವಿತರಣೆ ಮಾಡುವುದಾಗಿ ಹೇಳಿದ್ದಾರೆ.
ಸಾಮಾನ್ಯ ವರ್ಗದವರಿಗೆ 3000 ರೂ., ಪರಿಶಿಷ್ಟ ಜಾತಿ ಪಂಗಡದವರಿಗೆ 1200 ರೂ.ಗಳನ್ನು ಪಟ್ಟಣ ಪಂಚಾಯತಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ನಿಗದಿ ಮಾಡಲಾಗಿದೆ. ಅದೇ ರೀತಿ ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿ ನಿವೇಶನಕ್ಕೆ ಸಾಮಾನ್ಯ ವರ್ಗದವರಿಗೆ 4000 ರೂ., ಪರಿಶಿಷ್ಟ ಜಾತಿ, ಪಂಗಡದವರಿಗೆ 2000 ರೂ. ನಿಗದಿ ಮಾಡಲಾಗಿದೆ. ಬಿಬಿಎಂಪಿ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಾಮಾನ್ಯ ವರ್ಗದವರಿಗೆ 10,000 ರೂ., ಪರಿಶಿಷ್ಟ ಜಾತಿ ಪಂಗಡದವರಿಗೆ 5000 ರೂ. ನಿಗದಿ ಮಾಡಲಾಗಿದೆ ಎಂದು ಹೇಳಿದ್ದಾರೆ.