ಬೆಂಗಳೂರು: ಬಡತನದ ಬೇಗೆಯಿಂದ ಬಳಲಿ ಬದುಕನ್ನು ಅರಸುತ್ತ ನಗರದ ಕೊಳಚೆ ಪ್ರದೇಶಗಳಲ್ಲಿ ನೆಲೆ ಕಂಡುಕೊಂಡ ಕೊಳಗೇರಿ ನಿವಾಸಿಗಳಿಗೆ ಇಂದು ಸಂಭ್ರಮದ ದಿನವಾಗಿದೆ. ತಮ್ಮದಲ್ಲದ ನೆಲದಲ್ಲಿ ಗುಡಿಸಲು ಹಾಕಿ ಆತಂಕದಿಂದಲೇ ದಿನದೂಡುತ್ತಿದ್ದವರ ಕೈಗೆ ಅದೇ ನೆಲದ ಒಡೆತನದ ಹಕ್ಕುಪತ್ರ ವಿತರಣೆಗೆ ಚಾಲನೆ ನೀಡಲಾಗುತ್ತದೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ. ಗೋವಿಂದರಾಜನಗರ ಬಿಜಿಎಸ್ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 10.30 ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ. ವಸತಿ ಸಚಿವ ವಿ. ಸೋಮಣ್ಣ, ಕಂದಾಯ ಸಚಿವ ಆರ್. ಅಶೋಕ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಟಳ್ಳಿ, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಅ. ದೇವೇಗೌಡ ಮೊದಲಾದವರು ಭಾಗವಹಿಸಲಿದ್ದಾರೆ.