ಜೆಕ್ ರಾಜಧಾನಿ ಪ್ರೇಗ್‌ನಿಂದ ಹಂಗೇರಿಯ ರಾಜಧಾನಿ ಬುಡಾಪೆಸ್ಟ್ ಗೆ ಪ್ರಯಾಣಿಸುತ್ತಿದ್ದ ರೈಲು ದಕ್ಷಿಣ ಸ್ಲೋವಾಕಿಯಾದಲ್ಲಿ ಬಸ್‌ಗೆ ಡಿಕ್ಕಿ ಹೊಡೆದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋವ್ ಜಮ್ಕಿ ಪಟ್ಟಣದ ಸಮೀಪ ಅಪಘಾತ ಸಂಭವಿಸಿದ್ದು, ಯುರೋಸಿಟಿ ರೈಲಿನಲ್ಲಿ 100 ಕ್ಕೂ ಹೆಚ್ಚು ಜನರು ಇದ್ದರು ಎಂದು ಪೊಲೀಸರು ಮತ್ತು ಸ್ಲೋವಾಕ್ ರೈಲ್ವೆ ಕಂಪನಿ ZSSK ತಿಳಿಸಿದೆ.
ಸಾವುಗಳು ಮತ್ತು ಗಾಯಗಳನ್ನು ಸ್ಲೋವಾಕಿಯಾದ ರಕ್ಷಣಾ ಸೇವೆಯಿಂದ ದೃಢಪಡಿಸಲಾಗಿದೆ. ಮೃತಪಟ್ಟವರು ಬಸ್ ಪ್ರಯಾಣಿಕರಾಗಿದ್ದಾರೆ. ರೈಲಿನ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ವಿಡಿಯೋ ದೃಶ್ಯಾವಳಿಗಳು ತೋರಿಸಿದ್ದು, ಅಪಘಾತದಲ್ಲಿ ಬಸ್‌ಗೆ ತೀವ್ರ ಹಾನಿಯಾಗಿದೆ. ಆಂತರಿಕ ಸಚಿವ ಮಾಟಸ್ ಸುತೈ ಎಸ್ಟೋಕ್ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಲೋವಾಕಿಯಾದ ರಾಜಧಾನಿ ಬ್ರಾಟಿಸ್ಲಾವಾವನ್ನು ಬುಡಾಪೆಸ್ಟ್ ನೊಂದಿಗೆ ಸಂಪರ್ಕಿಸುವ ಪ್ರಮುಖ ರೈಲು ಹಳಿಯನ್ನು ಮುಚ್ಚಲಾಗಿದೆ. ಅಪಘಾತಕ್ಕೀಡಾದ ರೈಲಿನಲ್ಲಿ ಸಿಲುಕಿರುವ 100 ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಸ್‌ಗಳ ಮೂಲಕ ಹಂಗೇರಿಯ ಗಡಿಯಲ್ಲಿರುವ ಸ್ಟುರೊವೊ ಪಟ್ಟಣಕ್ಕೆ ಸಾಗಿಸಲಾಗಿದೆ.
ಇಂಜಿನ್ ಚಾಲಕ, ಜೆಕ್ ಪ್ರಜೆಯಾಗಿದ್ದು, ಲಘು ಸುಟ್ಟಗಾಯಗಳೊಂದಿಗೆ ಪಾರಾಗಿದ್ದಾರೆ. ನಾಲ್ವರು ರೈಲಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.