ಅಬುಧಾಬಿ: ಭಾರತ ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಬುಧಾಬಿಯಲ್ಲಿ ‘ಅಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ.
ಕನ್ನಡ, ತೆಲುಗು, ಮಲಯಾಳಂನಲ್ಲಿ ಮಾತನಾಡಿದ ಮೋದಿ, ಭಾರತ-ಯುಎಇ ಸಂಬಂಧ ಬಹಳ ಸುಧಾರಿಸಿದೆ. ಭಾರತೀಯರ ಪರವಾಗಿ ಸಂದೇಶ ಹೊತ್ತು ತಂದಿದ್ದೇನೆ. ಭಾರತ-ಯುಎಇ ಸ್ನೇಹ ಜಿಂದಾಬಾದ್ ಎಂದು ಹೇಳಿದ್ದಾರೆ.
ಭಾರತ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಯುಎಇನಲ್ಲಿ ಭಾರತೀಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅಬುಧಾಬಿಯಲ್ಲಿ ಇಂದು ಹೊಸ ಸೃಷ್ಟಿ ಇತಿಹಾಸ ಸೃಷ್ಟಿಯಾಗಿದೆ. ಇದರ ನೆನಪು ನನ್ನ ಇಡೀ ಜೀವನ ಪೂರ್ತಿ ಇರಲಿದೆ. ನೀವೆಲ್ಲ ವಿವಿಧೆಡೆಯಿಂದ ಅಬುಧಾಬಿಗೆ ಬಂದಿದ್ದೀರಿ. 140 ಕೋಟಿ ಭಾರತೀಯರ ಸಂದೇಶವನ್ನು ನಾನು ಇಲ್ಲಿಗೆ ತಂದಿದ್ದೇನೆ. ನಾನು ನನ್ನ ಕುಟುಂಬ ಸದಸ್ಯರನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದೇನೆ ಎಂದರು.
ಯುಎಇ ನನಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದೆ. ಇದು ಭಾರತೀಯರೆಲ್ಲರಿಗೂ ಸಂದ ಗೌರವವಾಗಿದೆ. ಹತ್ತು ವರ್ಷದಲ್ಲಿ ಇದು ನನ್ನ 7ನೇ ಯುಎಇ ಪ್ರವಾಸ ಆಗಿದೆ. ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಅಧ್ಯಕ್ಷರ ಸೋದರರು ಬಂದಿದ್ದರು. ಇದು 140 ಕೋಟಿ ಭಾರತೀಯರಿಗೆ ಸಿಕ್ಕ ಮನ್ನಣೆಯಾಗಿದೆ ಎಂದು ಹೇಳಿದ್ದಾರೆ.