ಕೋವಿಡ್ ಸೋಂಕಿಗೆ ದೀರ್ಘವಾಗಿ ಪೀಡಿತರಾಗಿದ್ದ ಮಂದಿಗೆ ನಿದ್ರಾಹೀನತೆ ಆವರಿಸುವ ಸಾಧ್ಯತೆಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ಸಂಶೋಧಕರು ಈ ಸಂಬಂಧ ಮಾಡಿದ ಅಧ್ಯಯನವೊಂದು, ಸುದೀರ್ಘ ಅವಧಿಗೆ ಕೋವಿಡ್ ಸೋಂಕಿತರಾದ 41%ನಷ್ಟು ಮಂದಿಯಲ್ಲಿ ನಿದ್ರೆ ಸಂಬಂಧ ಸಮಸ್ಯೆಗಳು ಕಾಣಿಸುತ್ತವೆ ಎಂದು ತಿಳಿಸಿದೆ.
“ಸುದೀರ್ಘ ಕೋವಿಡ್ ಇತಿಹಾಸ ಇರುವ ಮಂದಿಯಲ್ಲಿ ನಿದ್ರೆಯ ಸಮಸ್ಯೆಗಳು ಬಹಳ ಇದ್ದು, ಈ ಸಮಸ್ಯೆಗಳ ಲಕ್ಷಣಗಳು ತೋರುವ ತೀವ್ರತೆಯ ಕುರಿತು ಅಷ್ಟಾಗಿ ತಿಳಿದು ಬಂದಿಲ್ಲ,” ಎಂದು ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ನಿದ್ರೆ ಸಮಸ್ಯೆಗಳ ಕೇಂದ್ರದ ಪ್ರಾಧ್ಯಾಪಕ ಸಿಂತಿಯಾ ಪೆನಾ ಅರ್ಬಿ ತಿಳಿಸಿದ್ದಾರೆ.
ಕೋವಿಡ್ ಪೀಡಿತರಾಗಿದ್ದ 962 ರೋಗಿಗಳನ್ನು ಸಂಶೋಧನಾ ತಂಡ ಅಧ್ಯಯನಕ್ಕೆ ಒಳಪಡಿಸಿದೆ. ಕೋವಿಡ್‌ನಿಂದ ಚೇತರಿಕೆ ಕಂಡ ಸೋಂಕಿತರನ್ನು ನಿದ್ರೆ ಅಡಚಣೆ ಹಾಗೂ ಆಯಾಸ ಸಂಬಂಧ ಪ್ರಶ್ನೆಗಳಿಗೆ ಒಳಪಡಿಸಲಾಗಿದೆ.
ಅಧ್ಯಯನಕ್ಕೊಳಪಟ್ಟ ರೋಗಿಗಳ ಪೈಕಿ ಮೂವರಲ್ಲಿ ಇಬ್ಬರಿಗೆ ಮಧ್ಯಮದಿಂದ ತೀವ್ರ ನಿದ್ರಾಹೀನತೆ ಹಾಗೂ 21.8ರಷ್ಟು ಮಂದಿಗೆ ತೀವ್ರ ನಿದ್ರಾಹೀನತೆ ಇರುವುದು ಕಂಡು ಬಂದಿದೆ. ಅರ್ಧಕ್ಕಿಂತ ಹೆಚ್ಚು (58%) ರೋಗಿಗಳಲ್ಲಿ ಸಾಮಾನ್ಯದಿಂದ ಮಧ್ಯಮ ಮಟ್ಟದ ಅಡಚಣೆಗಳು ಕಂಡು ಬಂದರೆ, 41.3 ಪ್ರತಿಶತ ಮಂದಿಯಲ್ಲಿ ತೀವ್ರವಾದ ನಿದ್ರಾ ಸಮಸ್ಯೆಗಳು ಕಾಣಸಿಕ್ಕಿವೆ.