ಬೆಂಗಳೂರು: ನಗರದ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲಾಗುತ್ತದೆ. ಬಹು ಅಂತಸ್ತು ಸಾರಿಗೆ ಕಾರಿಡಾರ್ ನಿರ್ಮಿಸಲಿದ್ದು, ಸ್ಕೈ ಬಸ್, ಟ್ರಾಲಿ ಬಸ್ ಸೇವೆಗಳನ್ನು ಆರಂಭಿಸಲ ಚಿಂತನೆ ನಡೆದಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮಂಥನ್ ರಾಷ್ಟ್ರೀಯ ಸಮ್ಮೇಳನ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ಪಿಲ್ಲರ್ ನಲ್ಲಿಯೇ ಸ್ಕೈ ಬಸ್ ಓಡಿಸಲು ಚಿಂತನೆ ಇದೆ. ಇದರ ಸಾಧ್ಯತೆಯ ಬಗ್ಗೆ ವಿದೇಶಿ ಕಂಪನಿಗಳಿಂದ ಮೂರು ತಿಂಗಳಲ್ಲಿ ವರದಿ ಪಡೆಯಲಾಗುವುದು ಎಂದರು.
ಬಹು ಅಂತಸ್ತು ಸಾರಿಗೆ ಕಾರಿಡಾರ್ ನಿರ್ಮಿಸಲಿದ್ದು, ಮೆಟ್ರೋ ಫ್ಲೈ ಓವರ್ ಬಳಸಿಕೊಂಡು ಸ್ಕೈ ಬಸ್ ಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನರನ್ನು ತಲುಪಿಸುತ್ತವೆ. ಕೆಳಭಾಗದಲ್ಲಿ ಜೋತು ಬಿದ್ದಂತೆ ಸಂಚರಿಸುವ ಸ್ಕೈ ಬಸ್ ಸೇವೆಯನ್ನು ಹಲವು ನಗರಗಳಲ್ಲಿ ಆರಂಭಿಸಲು ಚಿಂತನೆ ನಡೆದಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮೂರು ಅಂತಸ್ತಿನ ಬಹು ಸಾರಿಗೆ ಕಾರಿಡಾರ್ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಕಾರಿಡಾರ್ ಕೆಳಭಾಗದಲ್ಲಿ ರಸ್ತೆ, ಅದರ ಮೇಲೆ ಫ್ಲೈ ಓವರ್, ಅದರ ಮೇಲ್ಭಾಗದಲ್ಲಿ ಮೆಟ್ರೋ ಸಂಚಾರ ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.