ಬೆಂಗಳೂರು: ಕೊರೋನಾ ಲಾಕ್ಡೌನ್ ನಂತರ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವು ಯುವಕರು, ಯುವತಿಯರು ಕೆಲಸದ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ, ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಗ್ರಾಮೀಣ ಪ್ರದೇಶದ ಯುವಕರು, ಮಹಿಳೆಯರಿಗೆ ತರಬೇತಿ ನೀಡಿ ಉದ್ಯೋಗ ಅವಕಾಶ ಕಲ್ಪಿಸಲು ಮುಂದಾಗಿದೆ. ಕೌಶಲ ನೀತಿ ಯೋಜನೆಯಡಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ಯುವಕರಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ. ಸ್ವ ಉದ್ಯೋಗ ಕೌಶಲ್ಯವನ್ನು ಕೂಡ ನೀಡಲಾಗುತ್ತದೆ.
ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ತರಬೇತಿ ನೀಡಲು ಸ್ಕಿಲ್ ಹಬ್ ನಿರ್ಮಾಣ ಮಾಡಲಾಗುವುದು. ಸ್ಕಿಲ್ ಆನ್ ವೀಲ್ ಬಸ್ ಮೂಲಕ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಬಸ್ ಅನ್ನು ತರಬೇತಿ ಕೇಂದ್ರವಾಗಿ ಪರಿವರ್ತಿಸಿ ಬ್ಯೂಟಿ ಥೆರಪಿಸ್ಟ್, ಸಬ್ ಮರ್ಸಿಬಲ್ ಪಂಪ್ ರಿಪೇರಿ, ಮೋಟಾರ್ ರಿಪೇರಿ, ಡಿಟಿಹೆಚ್, ಟಿವಿ, ಮಿಕ್ಸಿ, ಗ್ಯಾಸ್ ಮೊದಲಾದ ಗೃಹಪಯೋಗಿ ವಸ್ತುಗಳ ರಿಪೇರಿ, ಮೇಕಪ್ ತರಬೇತಿ ನೀಡಲಾಗುತ್ತದೆ.
ಪ್ರತಿ ಜಿಲ್ಲೆಗೊಂದು ಬಸ್ ನೀಡಿ ತರಬೇತಿ ನೀಡಲು ಯೋಜಿಸಲಾಗಿದೆ. ತರಬೇತಿ ಮುಗಿಸಿದ ಅಭ್ಯರ್ಥಿಗಳಿಗೆ ಉಚಿತವಾಗಿ ಟೂಲ್ ಕಿಟ್ ನೀಡಲಿದ್ದು ಕೌಶಲ್ಯ ವೃದ್ಧಿ, ಉದ್ಯೋಗವಕಾಶ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಲಿದ್ದು, ನಂತರ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.