ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ಕಸಬ್ ಎಂದು ಕರೆದು ಅಪಮಾನಿಸಿದ್ದ ಆರೋಪದ ಮೇಲೆ ಆರು ತಿಂಗಳ ಮಟ್ಟಿಗೆ ಕಾಲೇಜಿನಿಂದ ಅಮಾನತುಗೊಂಡಿದ್ದ ಮಣಿಪಾಲ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರೊಬ್ಬರನ್ನು ಮರಳಿ ಕೆಲಸಕ್ಕೆ ಕರೆಯಿಸಿಕೊಳ್ಳಲಾಗಿದೆ.
ಪ್ರಾಧ್ಯಾಪಕರಿಗೆ ಸದ್ಯದ ಮಟ್ಟಿಗೆ ಯಾವುದೇ ತರಗತಿಗಳನ್ನು ವಹಿಸಿಲ್ಲ. ಈತನ ವಿರುದ್ಧ ಇನ್ನಷ್ಟು ಕ್ರಮ ತೆಗೆದುಕೊಳ್ಳುವುದು ಬೇಡವೆಂದು ವಿದ್ಯಾರ್ಥಿಯೂ ಹೇಳಿಕೊಂಡಿದ್ದಾನೆ.
“ಪ್ರಾಧ್ಯಾಪಕರನ್ನು ಕೆಲಸದಿಂದ ತೆಗೆದುಹಾಕಿಲ್ಲ, ಆದರೆ ಅವರಿಗೆ ಶಿಕ್ಷೆ ನೀಡಲಾಗಿದೆ. ಅವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ತೆಗೆದುಕೊಂಡಿದ್ದು, ಅವರನ್ನು ಸದ್ಯದ ಮಟ್ಟಿಗೆ ನಿಗಾದಲ್ಲಿ ಇರಿಸಲಾಗಿದೆ,” ಎಂದು ಸಂಸ್ಥೆಯ ಉಪ ಪ್ರಾಂಶುಪಾಲ ಲೆ. ಜ (ಡಾ) ಎಂ.ಡಿ. ವೆಂಕಟೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತನ್ನನ್ನು ಕಸಬ್ ಎಂದು ಕರೆದ ಪ್ರಾಧ್ಯಾಪಕರಿಗೆ, “ನೀವು ನಿಮ್ಮ ಮಗನಿಗೂ ಹೀಗೆಯೇ ಭಯೋತ್ಪಾದಕನೊಬ್ಬನ ಹೆಸರಿನಲ್ಲಿ ಕರೆಯುವಿರಾ?” ಎಂದು ವಿದ್ಯಾರ್ಥಿ ತಿರುಗುತ್ತರ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ವಿಡಿಯೋದಲ್ಲಿ ಪ್ರಾಧ್ಯಾಪಕರು ಕ್ಷಮೆಯಾಚಿಸುತ್ತಿರುವುದೂ ಸಹ ದಾಖಲಾಗಿತ್ತು.