
ಕರಾಚಿ: ಭಾನುವಾರ ಕರಾಚಿಯ ಹೊರವಲಯದಲ್ಲಿರುವ ಅಫ್ಘಾನ್ ಶಿಬಿರದಲ್ಲಿ ಮನೆಯ ಛಾವಣಿ ಕುಸಿದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಗುಲ್ಶನ್-ಎ-ಮೇಮರ್ ಪ್ರದೇಶದ ಜಂಜಾಲ್ ಗೋತ್ ಅಫ್ಘಾನ್ ಶಿಬಿರದಲ್ಲಿ ಭಾನುವಾರ ಈ ಘಟನೆ ಸಂಭವಿಸಿದೆ.
ಕುಸಿತದಲ್ಲಿ ನಾಲ್ಕು ಜನರು ಗಾಯಗೊಂಡಿದ್ದಾರೆ. ಪೀಡಿತ ಕುಟುಂಬವು ಖೈಬರ್ ಪಖ್ತುನ್ಖ್ವಾದ ಬನ್ನುಗೆ ಸೇರಿದೆ. ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಶನಿವಾರ ಪಾಕಿಸ್ತಾನದ ಆಂತರಿಕ ಸಚಿವಾಲಯವು ಪಾಕಿಸ್ತಾನದಲ್ಲಿ ನೆಲೆಸಿರುವ ಅಫ್ಘಾನ್ ನಾಗರಿಕ ಕಾರ್ಡ್(ACC) ಹೊಂದಿರುವವರನ್ನು ಮಾರ್ಚ್ 31 ರೊಳಗೆ ದೇಶ ತೊರೆಯುವಂತೆ ತಿಳಿಸಿದೆ. ಅಫ್ಘಾನ್ ಪ್ರಜೆಗಳನ್ನು ಏಪ್ರಿಲ್ 1 ರಿಂದ ಗಡೀಪಾರು ಮಾಡಲಾಗುವುದು ಎಂದು ತಿಳಿಸಿದೆ.
ಪಾಕಿಸ್ತಾನವು ಎಲ್ಲಾ ಅಫ್ಘಾನ್‌ಗಳನ್ನು ದೇಶದಿಂದ ಹೊರಹಾಕಲು ಯೋಜಿಸುತ್ತಿದೆ ಎಂದು ಹೇಳಲಾಗಿತ್ತು. ಮೊದಲ ಬಾರಿಗೆ ಆಂತರಿಕ ಸಚಿವಾಲಯವು ಈ ಬೆಳವಣಿಗೆಯನ್ನು ಅಧಿಕೃತವಾಗಿ ದೃಢಪಡಿಸಿದೆ.