ನಾಗ್ ಪುರ: ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಆರು ರೈತರು ತಮ್ಮ ಜೀವನ ಅಂತ್ಯಗೊಳಿಸಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಆರು ರೈತರಲ್ಲಿ ಐವರು ಯವತ್ಮಾಲ್ ಜಿಲ್ಲೆಯ ಹಳ್ಳಿಯವರಾಗಿದ್ದು, ಒಬ್ಬರು ವಾರ್ಧಾ ಜಿಲ್ಲೆಯ ಗ್ರಾಮಕ್ಕೆ ಸೇರಿದವರಾಗಿದ್ದಾರೆ.
ಜುಲೈ ಮತ್ತು ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಎಲ್ಲಾ ಆರು ಜನರು ಸಾಲದ ಸುಳಿಯಲ್ಲಿ ಸಿಲುಕಿದ್ದರು. ಸಂಕಷ್ಟದಲ್ಲಿದ್ದ ರೈತರು ಖಾರಿಫ್ ಋತುವಿನ ಆರಂಭದಲ್ಲಿ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಲು ಸಾಲವನ್ನು ಪಡೆಯಲು ವಿಫಲರಾಗಿದ್ದಾರೆ ಎಂದು ರಾಜ್ಯ ಸರ್ಕಾರದ ಸಂಸ್ಥೆಯಾದ ಮಹಾರಾಷ್ಟ್ರದ ಕೃಷಿ ಮಿಷನ್ ಅಧ್ಯಕ್ಷ ಕಿಶೋರ್ ತಿವಾರಿ ಹೇಳಿದರು.
ಯವತ್ಮಾಲ್ ಜಿಲ್ಲಾಧಿಕಾರಿ ಅಮೋಲ್ ಯೆಡ್ಗೆ ಮಾತನಾಡಿ, ಜಿಲ್ಲೆಯಲ್ಲಿ ಆಗಸ್ಟ್ ತಿಂಗಳೊಂದರಲ್ಲೇ 51 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಅಧಿಕಾರಿಗಳು ಸಂಕಷ್ಟದಲ್ಲಿರುವ ರೈತರಿಗೆ ಸಲಹೆ ನೀಡಲು ಮತ್ತು ದುರಂತಗಳನ್ನು ತಡೆಯಲು ಅವರೊಂದಿಗೆ ಚರ್ಚಿಸುತ್ತಿದ್ದಾರೆ. ಜಿಲ್ಲಾಡಳಿತ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನ ಆರಂಭಿಸಿದೆ ಎಂದು ಹೇಳಿದರು.
2000 ರಿಂದ ರೈತರ ಆತ್ಮಹತ್ಯೆಯನ್ನು ದಾಖಲಿಸಿರುವ ರೈತ ವಕೀಲರ ಗುಂಪು ವಿದರ್ಭ ಜನ ಆಂದೋಲನ ಸಮಿತಿಯ ಪ್ರಕಾರ, ಈ ವರ್ಷದ ಜನವರಿಯಿಂದ 472 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 912 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿಸಿದೆ.