ತಲುಪಬೇಕಾದ ಸ್ಥಳಕ್ಕಿಂತ ಪ್ರಯಾಣದ ಹಾದಿಯೇ ಸುಂದರ ಎನಿಸುವ ಅದೆಷ್ಟು ನಿದರ್ಶನಗಳು ನಮ್ಮ ಪ್ರವಾಸಾನುಭವಗಳಲ್ಲಿ ಬಂದು ಹೋಗಿಲ್ಲ?
ದೇಶದ ವೈವಿಧ್ಯಮಯ ಭೂಪ್ರದೇಶಗಳನ್ನು ಹಾದು ಹೋಗುವ ವೇಳೆ ಕಣ್ಮನಗಳಿಗೆ ಸವಿಯಲು ಸಿಗುವ ಪ್ರಕೃತಿ ಸೌಂದರ್ಯದ ಕುರಿತು ಸಾಕಷ್ಟು ಬ್ಲಾಗ್‌ಗಳು ಹಾಗೂ ವ್ಲಾಗ್‌ಗಳಿಂದ ತಿಳಿದುಕೊಂಡಿದ್ದೇವೆ.
ದೇಶದ ಅತ್ಯಂತ ಸುಂದರ ಪ್ರಯಾಣಾನುಭವ ನೀಡಬಲ್ಲ ಅಂತ ಆರು ಹೆದ್ದಾರಿಗಳ ವಿವರ ಇಂತಿದೆ:
ಹೈದರಾಬಾದ್ – ವರಂಗಲ್ ಹೆದ್ದಾರಿ
ತೆಲಂಗಾಣದ ಭೋಪಾಲಪಟ್ನಂನಿಂದ ಛತ್ತೀಸ್‌ಘಡಕ್ಕೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ಸಂಚರಿಸುವ ವೇಳೆ ಎರಡೂ ಬದಿಗಳಲ್ಲಿ ಕಾಣಸಿಗುವ ಪರಿಸರ ಹಿತಾನುಭವ ನೀಡುತ್ತದೆ.
ಮುಂಬಯಿ – ಪುಣೆ ಎಕ್ಸ್ಪ್ರೆಸ್ ವೇ
ಪಶ್ಚಿಮ ಘಟ್ಟಗಳ ನಡುವೆ ಸುರಂಗಗಳು ಹಾಗೂ ಸೇತುವೆಗಳ ಮೂಲಕ ಹಾದು ಹೋಗುವ ಈ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಹೋದರೆ ಅಸಂಖ್ಯ ಝರಿಗಳು ಹಾಗೂ ಹಸಿರು ಹೊದ್ದ ಬೆಟ್ಟಗುಡ್ಡಗಳನ್ನು ನೋಡುವುದೇ ಆನಂದ.
ಮನಾಲಿ – ಲೆಹ್
ಹಿಮಾಲಯದ ಪರ್ವತಗಳ ನಡುವಿನ ಮನಾಲಿ, ಲೆಹ್, ಲಾಹೌಲ್ ಹಾಗೂ ಸ್ಪಿತಿ ಕಣಿವೆಗಳು ಹಾಗೂ ಪರ್ವಗಳ ಕಡಿದಾದ ರಸ್ತೆಗಳಲ್ಲಿ ಹಾದು ಹೋಗುವ 475ಕಿಮೀ ಉದ್ದದ ಈ ರಸ್ತೆಯಲ್ಲಿ ಪ್ರಯಾಣಿಸಲೆಂದೇ ಪ್ರವಾಸಿಗರು ಮನಾಲಿಗೆ ಬಂದು ಲೆಹ್‌ಗೆ ಹೋಗುತ್ತಾರೆ. ಈ ಭಾಗದಲ್ಲಿ ಬೈಕಿಂಗ್, ಸೈಕ್ಲಿಂಗ್ ಹಾಗು ಕಾರು ಚಾಲನೆಗಳ ಅನುಭೂತಿ ಪಡೆಯುವುದು ಪ್ರವಾಸಿಗರ ಮೆಚ್ಚಿನ ಚಟುವಟಿಕೆಯಾಗಿದೆ.
ಚೆನ್ನೈ – ಪಾಂಡಿಚೆರಿ
ಪೂರ್ವ ಕರಾವಳಿ ಹೆದ್ದಾರಿ ಎಂದೇ ಖ್ಯಾತವಾದ ಈ ರಸ್ತೆಯಲ್ಲಿ ಸಮುದ್ರದ ನೋಟ ಹಾಗೂ ಗಾಳಿಯ ಅನುಭವ ಪಡೆದುಕೊಂಡು ಸಾಗುವುದೇ ಮಜ. ಬಂಗಾಳ ಕೊಲ್ಲಿಗೆ ಸಮನಾಂತರವಾಗಿರುವ ಈ 690ಕಿಮೀ ಹೆದ್ದಾರಿಯು ಚೆನ್ನೈನಿಂದ ಕಡಲೂರು ಮೂಲಕ ಪಾಂಡಿಚೆರಿಯನ್ನು ಸಂಪರ್ಕಿಸುತ್ತದೆ.
ಬೆಂಗಳೂರು – ಊಟಿ
533ಕಿಮೀ ಉದ್ದದ ಬೆಂಗಳೂರು – ಊಟಿ ಹೆದ್ದಾರಿಯು ಪಶ್ಚಿಮ ಹಾಗೂ ಪೂರ್ವ ಘಟ್ಟಗಳನ್ನು ಹಾದು ಹೋಗುತ್ತದೆ. ಮೈಸೂರಿನ ಮೂಲಕ ಊಟಿಗೆ ಹೋಗುವುದಾದರೆ ಬಂಡೀಪುರ ಹಾಗೂ ಮುದುಮಲೈ ರಾಷ್ಟ್ರೀಯ ಅಭಯಾರಣ್ಯಗಳು ಹಾಗೂ ಘಟ್ಟಗಳನ್ನು ಹಾದು ಹೋಗಬೇಕು.
ಗ್ಯಾಂಗ್ಟಾಕ್ – ತ್ಸೋಂಗ್ಮೋ ಮತ್ತು ನಾಥುಲಾ ಪಾಸ್
ಚಳಿಗಾಲದಲ್ಲಿ 37 ಕಿಮೀ ಉದ್ದದ ಜವಾಹರಲಾಲ್ ನೆಹ್ರೂ ರಸ್ತೆಯಲ್ಲಿ ಹೋಗುವುದಾದರೆ ಹಿಮಾಲಯದ ಹಿಮಹೊದ್ದ ಪರ್ವತಶ್ರೇಣಿಗಳನ್ನು ನೋಡುವುದೇ ಒಂದು ಆನಂದ.