
ಬೆಂಗಳೂರು: ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ವಿವಾಹ ಮಾ. 6 ರಂದು ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರೊಂದಿಗೆ ನಡೆಯಲಿದೆ.
ಮಾರ್ಚ್ 9ರಂದು ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಮಿಳುನಾಡು ಮೂಲದ ಶಿವಶ್ರೀ ಈಗಾಗಲೇ ಗಾಯನದಿಂದ ಖ್ಯಾತರಾಗಿದ್ದಾರೆ. ಎರಡೂ ಕುಟುಂಬದವರ ನಡುವೆ ಮಾತುಕತೆ ನಡೆದು ಮದುವೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಇತ್ತೀಚೆಗೆ ಆರ್ಟ್ ಆಫ್ ಲಿವಿಂಗ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಶಿವಶ್ರೀ ಭರತನಾಟ್ಯ ಕಲಾವಿದೆಯೂ ಆಗಿದ್ದು, ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಪದವಿ ಪಡೆದಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಶಿವಶ್ರೀ ಅವರು ಹಾಡಿದ ರಾಮನ ಕುರಿತ ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.