ಕೋಲಾರ: ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ನಡೆದ ಅಣ್ಣ-ತಂಗಿ ಪ್ರೀತಿಯ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಚಿಕ್ಕಪ್ಪ ಮತ್ತು ದೊಡ್ಡಪ್ಪನ ಮಕ್ಕಳಾಗಿರುವ ಅಣ್ಣ-ತಂಗಿ ಪ್ರೀತಿಸಿದ್ದು, ಇವರ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಬಂಧದಲ್ಲಿ ಅಣ್ಣ-ತಂಗಿಯಾಗಿರುವ ನಿಮಗೆ ಮದುವೆ ಮಾಡುವುದಿಲ್ಲ ಎಂದು ಇಬ್ಬರಿಗೂ ಬೇರೆಯವರೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ.
ಮನೆಯವರು ಹೇಳಿದ್ದರಿಂದ ಒಪ್ಪಿಕೊಂಡಿದ್ದ ಯುವತಿ ನಂತರ ಕೋಲಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾಳೆ. ಬಳಿಕ ಹಿರಿಯರೆಲ್ಲ ಸೇರಿ ಪಂಚಾಯಿತಿ ನಡೆಸಿದ್ದು, ಯುವತಿಗೆ 7.5 ಲಕ್ಷ ರೂಪಾಯಿ ನಗದು, ನಿವೇಶನ, ಮನೆ ಕೊಡುವುದಾಗಿ ಭರವಸೆ ನೀಡಲಾಗಿದೆ. ಆದರೆ, ಇದಕ್ಕೆ ಒಪ್ಪದ ಯುವತಿ ಕೋಲಾರ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.
ಯುವಕನ ಮನೆಯವರು ಯುವಕನಿಗೆ ನಿರೀಕ್ಷಣಾ ಜಾಮೀನು ಪಡೆಯಲು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಸಂಬಂಧದಲ್ಲಿ ಸಹೋದರನಾದರೂ ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಯುವತಿ ಹಠಕ್ಕೆ ಬಿದ್ದಿದ್ದಾಳೆ. ಯುವತಿಯನ್ನು ಮಹಿಳಾ ಸಾಂತ್ವನ ಕೇಂದ್ರ ದಲ್ಲಿ ಇರಿಸಲಾಗಿದೆ. ಆಕೆ ಯುವಕನ ವಿರುದ್ಧವೂ ವೇಮಗಲ್ ಠಾಣೆಗೆ ದೂರು ನೀಡಿದ್ದಾಳೆ ಎನ್ನಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಎರಡೂ ಮನೆಯವರು ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.