ಬೆಂಗಳೂರು: ದಕ್ಷಿಣ ಭಾರತದ ಶಕ್ತಿ ಪೀಠಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಲಿದೆ.
ಮಾರ್ಚ್ 16 ರಂದು ಮಾರಿಕಾಂಬಾ ದೇವಿಯ ಮೂರ್ತಿಯನ್ನು ಶೋಭಾಯಾತ್ರೆ ಮೂಲಕ ಗದ್ದುಗೆಗೆ ತರಲಾಗುವುದು. ಮಾರ್ಚ್ 23 ರವರೆಗೆ ಮಾರಿಕಾಂಬ ಜಾತ್ರೆ ನಡೆಯಲಿದೆ. ಜಾತ್ರೆಯ ಅವಧಿಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ದಾವಣಗೆರೆ ದುರ್ಗಾಂಬಿಕಾ ಜಾತ್ರೆ
ಮಧ್ಯ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ದಾವಣಗೆರೆ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ಕೂಡ ಆರಂಭವಾಗಿದೆ. ಮಾರ್ಚ್ 16 ರಂದು ಬೆಳಿಗ್ಗೆ ಪಟ್ಟದ ಕೋಣದಿಂದ ಸಿರಿಂಜ್ ನಿಂದ ರಕ್ತ ತೆಗೆದು ದೇವಿಗೆ ಅರ್ಪಿಸಲಾಗುವುದು. ಮಹಾಪೂಜೆಯ ನಂತರ ನಗರದಲ್ಲಿ ಚರಗ ಚೆಲ್ಲಲಾಗುತ್ತದೆ. ಮಾರ್ಚ್ 18 ರಿಂದ ಅಕ್ಕಮಹಾದೇವಿ ಕಲ್ಯಾಣ ಮಂದಿರದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 27 ರ ವರೆಗೆ ದೇವಾಲಯ ಮುಂಭಾಗದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾರ್ಚ್ 18 ರಿಂದ 20 ರವರೆಗೆ ಬಯಲು ಜಂಗಿ ಕುಸ್ತಿ ಆಯೋಜಿಸಲಾಗಿದೆ.