
ದಾವಣಗೆರೆ: ತಮ್ಮ ಹೆಸರಲ್ಲಿ ವೈಯಕ್ತಿಕ ಟ್ರಸ್ಟ್ ಮಾಡಿಕೊಂಡು 30 ವರ್ಷ ರಹಸ್ಯವಾಗಿಟ್ಟಿದ್ದು ಏಕೆ? ಸ್ವಾಮೀಜಿ ಅವರ ಹೆಸರಿಗೆ ಮಠದ 2000 ಕೋಟಿ ರೂ. ಆಸ್ತಿ ಬರೆದುಕೊಂಡಿದ್ದು ಏಕೆ ಎಂದು ಸಾದರ ಲಿಂಗಾಯಿತ ಸಮಾಜದ ಮುಖಂಡರು ಪ್ರಶ್ನಿಸಿದ್ದಾರೆ.
ವೀರಶೈವ ಲಿಂಗಾಯಿತ ಭಕ್ತರ ಬಳಗದ ವತಿಯಿಂದ ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಏಕವ್ಯಕ್ತಿ ಟ್ರಸ್ಟ್ ಡೀಡ್ ಮಾಡಿಕೊಂಡು ತರಳಬಾಳು ಮಠಕ್ಕೆ ಸೇರಿದ ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಮಠವನ್ನು ಖಾಸಗಿ ಸ್ವತ್ತಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿರಿಗೆರೆ ತರಳಬಾಳು ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಬೇಕೆಂದು ಹೋರಾಟ ಮುಂದುವರೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಭಕ್ತರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
1990ರಲ್ಲಿ ರಚನೆಯಾದ ಏಕವ್ಯಕ್ತಿ ಟ್ರಸ್ಟ್ ಡೀಡ್ ರದ್ದುಪಡಿಸಬೇಕು. 1977ರ ಬೈಲಾ ಪ್ರಕಾರ ತರಳಬಾಳು ಮಠಕ್ಕೆ ಉತ್ತರಾಧಿಕಾರಿ ನೇಮಿಸಬೇಕು. ಹಾಳಾದ ಶಾಲಾ-ಕಾಲೇಜುಗಳ ಅಭಿವೃದ್ಧಿಪಡಿಸಿ ಅಕ್ಷರ ದಾಸೋಹ ಮುಂದುವರಿಸಬೇಕು. ಮಠದ ಭಕ್ತರ ಮೇಲೆ ಹಾಕಿದ ಪ್ರಕರಣಗಳನ್ನು ಹಿಂಪಡೆಯಬೇಕು. ಸಾದರ ಲಿಂಗಾಯತ ಸಮಾಜದಲ್ಲಿ ಮೂಡಿರುವ ಗೊಂದಲ ನಿವಾರಿಸಬೇಕು ಎಂದು ಸಭೆ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
1977 ರಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರಚಿಸಿದ ಬೈಲಾ ರದ್ದುಪಡಿಸಿ 1990ರಲ್ಲಿ ಏಕವ್ಯಕ್ತಿ ಟ್ರಸ್ಟ್ ಡೀಡ್ ಮಾಡಿಕೊಳ್ಳಲಾಗಿದೆ. ಹಳೆಯ ಮಠವನ್ನು ನುಂಗಿ ಹೊಸ ನಾಮಕರಣ ಮಾಡಲಾಗಿದೆ. ಜಮೀನು, ಶಿಕ್ಷಣ ಸಂಸ್ಥೆ ಸೇರಿದಂತೆ ಮಠದ ಸಂಪೂರ್ಣ ಆಸ್ತಿ ಏಕ ವ್ಯಕ್ತಿಗೆ ವರ್ಗಾವಣೆಗೊಂಡಿದೆ. ಟ್ರಸ್ಟ್ ನಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪರಮಾಧಿಕಾರ ಹೊಂದಿದ್ದು, ಎಲ್ಲವೂ ಅವರ ಸ್ವತ್ತಾಗಿ ಬದಲಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಉದ್ಯಮಿಯ ಅಣಬೇರು ರಾಜಣ್ಣ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಮುಖಂಡ ಆನಗೋಡು ನಂಜುಂಡಪ್ಪ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರಿನ ನಾಗತಿ ಬಳಗಲು ನಂಜುಂಡೇಶ್ವರ ದೇವಾಲಯ ಆವರಣದಲ್ಲಿ ಶನಿವಾರ ರಾತ್ರಿ ನಡೆದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 32ನೇ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಜೊತೆಗೇ ಇದ್ದವರೇ ಕುತ್ತಿಗೆ ಕೊಯ್ಯುತ್ತಾರೆ. ಮಠದ ನಿಜ ಭಕ್ತರು ತುಂಬಾ ಜಾಗರೂಕರಾಗಿರಬೇಕು. ಕೆಲವರು ಸ್ವಾರ್ಥ ಈಡೇರದಿದ್ದರೆ ಮಠದ ವಿರುದ್ಧ ಭುಸುಗುಟ್ಟುತ್ತಾರೆ. ನಾವು ಅಂಜಿದರೆ ಸ್ವಾರ್ಥಿಗಳು ತಲೆ ಮೇಲೆ ಕೂರುತ್ತಾರೆ. ಹಾಗಾಗಿ ಮಠದ ಭಕ್ತರು ಎಚ್ಚರಿಕೆಯ ಹಾದಿ ಹಿಡಿಯಬೇಕು. ದೊಡ್ಡ ಗುರುಗಳನ್ನು ಈ ಹಿಂದೆ ದೂಷಿಸಿದ ಶನಿ ಸಂತಾನ ಇಂದು ನಮ್ಮನ್ನು ದೂರುತ್ತಿದೆ ಎಂದು ಹೇಳಿದ್ದಾರೆ.