ಹಾಸನ: ರೈತರು ಆರ್ಥಿಕವಾಗಿ ಸದೃಢರಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತಸಿರಿ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದು, ಸಿರಿಧಾನ್ಯಗಳನ್ನು ಬೆಳೆಯುವಂತೆ ರೈತರಿಗೆ ಪ್ರೋತ್ಸಾಹಿಸಲು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ದೊರೆಯುವ ಪ್ರೋತ್ಸಾಹಧನ ಮತ್ತಿತರ ಸೌಲಭ್ಯಗಳನ್ನು ಪಡೆಯುವಂತೆ ಕೃಷಿ ಇಲಾಖೆಯ ಜಾಗೃತಿ ಮೂಡಿಸುತ್ತಿದೆ.
ಈ ಸಿರಿಧಾನ್ಯ ಯೋಜನೆಯಲ್ಲಿ ಸೌಲಭ್ಯಗಳನ್ನು ಪಡೆಯಲು ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮಹಿಳೆಯರು ಹಾಗೂ ಹಿಂದುಳಿದ ವರ್ಗದ ರೈತರಿಗೆ ಆದ್ಯತೆ ನೀಡಲಾಗುವುದು.
ಸಿರಿ ಧಾನ್ಯಗಳನ್ನು ಬೆಳೆಯುವ ರೈತರಿಗೆ ಬೆಳೆ ಸಮೀಕ್ಷೆ ಆಧಾರದ ಮೇರೆಗೆ ಪರಿಶೀಲಿಸಿ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂಪಾಯಿಗಳಂತೆ ಗರಿಷ್ಠ 2 ಹೆಕ್ಟೇರ್ಗೆ ಮಾತ್ರ ಸೀಮಿತವಾಗುವಂತೆ ಆಯ್ಕೆಯಾದ ಫಲಾನುಭವಿಗಳಿಗೆ ನೇರ ಸೌಲಭ್ಯ ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಮೂಲಕ ಪ್ರೋತ್ಸಾಹ ಧನ ನೀಡಲಾಗುವುದು. ಹಾಗೂ ಸಿರಿಧಾನ್ಯ ಬೆಳೆದಿರುವ ವಿಸ್ತೀರ್ಣಕ್ಕೆ ಸಮಾನವಾಗಿ ಪ್ರೋತ್ಸಾಹಧನ ಪಾವತಿಸಲಾಗುವುದು.
ಸಿರಿ ಧಾನ್ಯಗಳಾದ ನವಣೆ, ಸಾಮೆ, ಊದಲು, ಹಾರಕ, ಕೊರಲೆ ಮತ್ತು ಬರಗು ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆಯನ್ನು ವೃದ್ಧಿಸುವುದು ರೈತರನ್ನು ಮುಖ್ಯವಾಹಿನಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಸಿರಿಧಾನ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖ ಆಹಾರ ಬೆಳೆಗಳಾಗಿ ಹೊರಹೊಮ್ಮುತ್ತಿದ್ದು, ಅತಿ ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿಯೂ ಬೆಳೆಯಬಹುದಾಗಿದೆ. ಹಾಗೆಯೇ ಶುಷ್ಕ ಒಣ ಪರಿಸ್ಥಿತಿಗಳಲ್ಲಿ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಸಹ ಬೆಳೆಯುವುದರ ಜೊತೆಗೆ ಕನಿಷ್ಠ ಕೃಷಿ ಪರಿಕರಗಳ ಅವಶ್ಯಕತೆ ಇರುತ್ತದೆ.
ಸಿರಿಧಾನ್ಯಗಳು ಏಕದಳ ಧಾನ್ಯಗಳಾದ ಹೋಲಿಸಿದರೆ ಅತ್ಯಂತ ಪೌಷ್ಟಿಕಾಂಶ ಗುಣಲಕ್ಷಣಗಳಿಂದ ಕೂಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸಹಜ ಪ್ರೊಟೀನ್ ನಾರಿನಂಶ ಕ್ಯಾಲ್ಸಿಯಂ ಮತ್ತು ಖನಿಜಾಂಶಗಳನ್ನು ಹೊಂದಿದ್ದು, ಆಹಾರ ಕ್ರಮದಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಪಡೆಯಲು ಸಾಧ್ಯವಾಗದ ಜನಸಾಮಾನ್ಯರಿಗೆ ಪೌಷ್ಟಿಕಾಂಶದ ಭದ್ರತೆಯನ್ನು ಖಾತರಿಪಡಿಸುತ್ತದೆ.
ಸಿರಿಧಾನ್ಯಗಳು ಉತ್ತಮ ಪೌರ ಆಹಾರವಾಗಿದ್ದು, ಅದರಲ್ಲೂ ಪ್ರಸ್ತುತ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಧಾನ್ಯಗಳು ಸಹಕಾರಿಯಾಗಿವೆ. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯುವುದು ಅನುಕೂಲಕರವಾಗಿದೆ. ಸಿರಿಧಾನ್ಯಗಳ ಮಾರಾಟಕ್ಕೆ ಸಂಪರ್ಕ ಹೆಚ್ಚು ಇವುಗಳನ್ನು ಬೆಳೆಯುವ ಕೃಷಿಕರನ್ನು ಮುಖ್ಯವಾಹಿನಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.