ಬಾಲಿವುಡ್ ನ ಗಾಯಕ ಲಕ್ಕಿ ಅಲಿ ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ. ಬೆಂಗಳೂರು ಸಮೀಪದಲ್ಲಿರುವ ತಮ್ಮ ಫಾರ್ಮ್ ಅನ್ನು ಒತ್ತುವರಿ ಮಾಡಲು ರೋಹಿಣಿ ಅವರ ಪತಿ ಸುಧೀರ್ ರೆಡ್ಡಿ ಪ್ರಯತ್ನಿಸುತ್ತಿದ್ದು, ಇದಕ್ಕೆ ರೋಹಿಣಿ ಅವರು ತಮ್ಮ ಪ್ರಭಾವ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ದುಬೈನಲ್ಲಿರುವ ಲಕ್ಕಿ ಅಲಿ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಸುದೀರ್ಘ ಪೋಸ್ಟ್ ಹಾಕಿದ್ದು, ಕಳೆದ 50 ವರ್ಷಗಳಿಂದ ನಾನು ಈ ಫಾರ್ಮ್ ಒಡೆತನ ಹೊಂದಿದ್ದೇನೆ. ನನ್ನ ಕುಟುಂಬ ಹಾಗೂ ಇಬ್ಬರು ಪುಟ್ಟ ಮಕ್ಕಳು ಅಲ್ಲಿಯೇ ವಾಸವಾಗಿದ್ದು, ಅವರ ಸುರಕ್ಷತೆ ಕುರಿತು ಚಿಂತಿತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಯಲಹಂಕದ ಕೆಂಚೇನಹಳ್ಳಿ ಬಳಿ ಇರುವ ಈ ಫಾರ್ಮನ್ನು ಬೆಂಗಳೂರು ಲ್ಯಾಂಡ್ ಮಾಫಿಯಾದ ಸುಧೀರ್ ರೆಡ್ಡಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ತಮ್ಮ ಪತಿ ಸುಧೀರ್ ರೆಡ್ಡಿ ಅವರ ಈ ಕಾರ್ಯಕ್ಕೆ ಪ್ರಭಾವ ಬಳಸಿ ಕುಮ್ಮಕ್ಕು ನೀಡುತ್ತಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಲಕ್ಕಿ ಆಲಿ ತಮ್ಮ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ತಾವು ದುಬೈಗೆ ತೆರಳುವ ಮುನ್ನ ಕರ್ನಾಟಕದ ಡಿಜೆಪಿಯವರನ್ನು ಭೇಟಿಯಾಗಲು ಪ್ರಯತ್ನಿಸಿದ್ದು, ಆದರೆ ಅವರ ಭೇಟಿ ಸಾಧ್ಯವಾಗಲಿಲ್ಲ. ಹೀಗಾಗಿ ಎಸಿಪಿ ಅವರ ಬಳಿ ದೂರು ನೀಡಿದ್ದು, ಹೆಚ್ಚಿನ ಪ್ರಯೋಜನವಾಗುತ್ತಿಲ್ಲ ಎಂದು ಲಕ್ಕಿ ಆಲಿ ತಿಳಿಸಿದ್ದಾರೆ.