ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅ. 28 ರಂದು ಆಯೋಜಿಸಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, 60 ಲಕ್ಷಕ್ಕೂ ಅಧಿಕ ಜನ ನೋಂದಣಿ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕ್ಯೂ ಆರ್ ಕೋಡ್ ಆರಂಭಿಸಿದ್ದು, 29 ರಾಜ್ಯ ಮತ್ತು 25 ದೇಶಗಳಿಂದ 60 ಲಕ್ಷಕ್ಕೂ ಅಧಿಕ ಜನ ನೋಂದಣಿ ಮಾಡಿಕೊಂಡಿದ್ದಾರೆ. ಒಂದು ಕೋಟಿ ಜನರು ಏಕಕಾಲದಲ್ಲಿ ಕನ್ನಡ ಗೀತೆಗಳನ್ನು ಹಾಡಲಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ‘ಜಯ ಭಾರತ ಜನನಿಯ ತನುಜಾತೆ’, ಉಯಿಲಗೋಳ ನಾರಾಯಣರಾಯ ಅವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಚೆನ್ನವೀರ ಕಣವಿಯವರ ‘ವಿಶ್ವ ವಿನೂತನ ವಿದ್ಯಾ ಚೇತನ’, ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ಡಿ.ಎಸ್. ಕರ್ಕಿ ಅವರ ‘ಹಚ್ಚೇವು ಕನ್ನಡದ ದೀಪ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಲಾಗುವುದು.