ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯನ್ನು ಲಾಡ್ಜ್ ಗೆ ಕರೆದೊಯ್ದ ಯುವಕನೊಬ್ಬ ಆಕೆಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಾಲಕಿ ಮೃತಪಟ್ಟಿದ್ದು, ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಸಿಂದಗಿ ತಾಲೂಕಿನಲ್ಲಿ ಘಟನೆ ನಡೆದಿದೆ. ಶಿವಕುಮಾರ ಎಂಬಾತ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ. ಮೇ 6 ರಂದು ಮದುವೆಯಾಗುವುದಾಗಿ ಬಾಲಕಿಯನ್ನು ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದ ಪೋಷಕರು ಹುಡುಕಾಟ ನಡೆಸಿದ್ದಾರೆ.
ಮದುವೆಯಾಗುವುದಾಗಿ ಯಂಕಂಚಿ ಲಾಡ್ಜ್ ಗೆ ಕರೆದುಕೊಂಡು ಬಂದ ಯುವಕ, ಬಾಲಕಿಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನಂತರ ಲಾಡ್ಜ್ ಗೆ ಬಂದಿದ್ದ ಯುವಕನ ಸ್ನೇಹಿತ ಬಸವನಗೌಡ ನಿಮ್ಮನ್ನು ಮನೆಯವರು ಹುಡುಕುತ್ತಿದ್ದು, ಅವರ ಕೈಗೆ ಸಿಕ್ಕರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಊರಿಗೆ ಬರಬೇಡಿ, ಎಲ್ಲಾದರೂ ವಿಷ ಕುಡಿದು ಸಾಯಿರಿ ಎಂದು ಹೇಳಿದ್ದಾನೆ.
ಇದರಿಂದ ನೊಂದ ಯುವಕ ಮತ್ತು ಬಾಲಕಿ ವಿಷ ಕುಡಿದಿದ್ದಾರೆ. ಪೋಷಕರು ಹುಡುಕಾಡಿಕೊಂಡು ಲಾಡ್ಜ್ ಗೆ ಬಂದಾಗ ವಿಷಸೇವಿಸಿ ಒದ್ದಾಡುತ್ತಿದ್ದ ಬಾಲಕಿ ಮತ್ತು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಆಕೆ ಮೃತಪಡುವ ಮೊದಲು ಪೋಷಕರಿಗೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆನ್ನಲಾಗಿದೆ.
ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನಿಗೆ ಸಹಾಯ ಮಾಡಿದ್ದ ಸ್ನೇಹಿತರ ವಿರುದ್ಧ ಕೇಸ್ ದಾಖಲಾಗಿದೆ ಎಂದು ಹೇಳಲಾಗಿದೆ.