ಪಂಜಾಬ್ ನ ಸಂಗ್ರೂರು ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳದ(ಅಮೃತಸರ) ಅಭ್ಯರ್ಥಿ ಸಿಮ್ರಂಜಿತ್ ಸಿಂಗ್ ಮಾನ್ ಜಯ ಗಳಿಸಿದ್ದಾರೆ. ಹಾಗೇ ಜಯಗಳಿಸಿ ಸುಮ್ಮನಾಗಿದ್ದರೆ ಏನೂ ಆಗುತ್ತಿರಲಿಲ್ಲ. ಜಯ ಸಾಧಿಸುತ್ತಿದ್ದಂತೆಯೇ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ತಮ್ಮ ಜಯದ ಹಿಂದೆ ಖಲಿಸ್ತಾನ್ ಪ್ರತ್ಯೇಕತಾವಾದಿ ಉಗ್ರಗಾಮಿ ಸಂಘಟನೆಯ ಜರ್ನೇಲ್ ಸಿಂಗ್ ಭಿಂದ್ರನ್ ವಾಲೆ ಅವರ ಹಾಕಿಕೊಟ್ಟ ಮಾರ್ಗಗಳು ಕೆಲಸ ಮಾಡಿವೆ ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ಈ ಗೆಲುವು ನಮ್ಮ ಪಕ್ಷದ ಕಾರ್ಯಕರ್ತರ ಗೆಲುವಾಗಿದೆ. ನಮಗೆ ಸಂತ ಜರ್ನೇಲ್ ಸಿಂಗ್ ಭಿಂದ್ರನ್ ವಾಲೆ ಹೇಳಿಕೊಟ್ಟ ಪಾಠಗಳಿಂದ ಈ ಗೆಲುವಾಗಿದೆ ಎಂದು ಹೇಳಿದ್ದಾರೆ.
ಜರ್ನೇಲ್ ಸಿಂಗ್ ಭಿಂದ್ರನ್ ವಾಲೆ ಒಬ್ಬ ಧಾರ್ಮಿಕ ಮುಖಂಡನಾಗಿದ್ದು, ಈ ಹಿಂದೆ ಪಾಕಿಸ್ತಾನದ ಕುಮ್ಮಕ್ಕಿನಿಂದ ಪ್ರತ್ಯೇಕ ಸಿಖ್ ರಾಜ್ಯಕ್ಕಾಗಿ ಹೋರಾಟ ಮಾಡಿ, ಹಲವು ಬಾರಿ ಹಿಂಸಾಚಾರಕ್ಕೂ ಕಾರಣನಾಗಿದ್ದ. 1982 ರಲ್ಲಿ ಗೋಲ್ಡನ್ ಟೆಂಪಲ್ ಆವರಣದಲ್ಲಿ ಸಮಾನಮನಸ್ಕರ ಸಭೆ ನಡೆಸಿದ್ದಲ್ಲದೇ, ಅಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿದ್ದ. ಈ ಚಟುವಟಿಕೆಗಳನ್ನು ಹತ್ತಿಕ್ಕಲು ಅಂದಿನ ಪ್ರಧಾನಿ ಇಂದಿರಾಗಾಂಧಿ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಡೆಸಿ ಭಿಂದ್ರನ್ ವಾಲೆ ಮತ್ತು ಸಹಚರರನ್ನು ಹತ್ಯೆಗೈದಿದ್ದರು.
ಇಂತಹ ಸಂಘಟನೆಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಸಿಮ್ರಂಜಿತ್ ಸಿಂಗ್ ಮಾನ್ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ಭಯೋತ್ಪಾದನೆಯ ಆ ಕರಾಳ ದಿನಗಳನ್ನು ಕಾಂಗ್ರೆಸ್ ಪಕ್ಷ ಮರೆತಿಲ್ಲ. ಸಂಗ್ರೂರಿನಲ್ಲಿ ಪ್ರಜಾಪ್ರಭುತ್ವಕ್ಕೆ ಸೋಲಾಗಿದೆ ಎಂದು ಹೇಳಿದ್ದಾರೆ.