ಬೆಂಗಳೂರು: ವಿವಾಹ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿ ಆನ್ಲೈನ್ ಮೂಲಕವೂ ಪಡೆದುಕೊಳ್ಳುವ ಸುಧಾರಿತ ವ್ಯವಸ್ಥೆ ಶೀಘ್ರವೇ ಜಾರಿಯಾಗಲಿದೆ. ಎಲ್ಲಾ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯಲಿದ್ದು, ಕಚೇರಿ ಅಲೆದಾಟಕ್ಕೆ ಬ್ರೇಕ್ ಬೀಳಲಿದೆ. ಕುಳಿತಲ್ಲೇ ವಿವಾಹನೊಂದಣಿ ಮಾಡಿಕೊಳ್ಳಬಹುದಾಗಿದೆ.
ಹಿಂದೂ ವಿವಾಹ ನೋಂದಣಿ ಕಾಯ್ದೆಯಡಿ ಮದುವೆ ನೋಂದಣಿ ಮಾಡಿಸುವವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗುವ ಅಗತ್ಯ ಇರುವುದಿಲ್ಲ. ವಧು-ವರ ಹಾಗೂ ಸಾಕ್ಷಿದಾರರ ಆಧಾರ್ ಕಾರ್ಡ್ ಸೇರಿ ಇತರೆ ವಿವರಗಳೊಂದಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಮದುವೆ ನೋಂದಣಿ ಪ್ರಮಾಣ ಪತ್ರ ಪಡೆಯುವ ಸುಧಾರಿತ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೊಳಿಸಲಾಗುತ್ತದೆ.
ಮಧ್ಯವರ್ತಿಗಳನ್ನು ಅವಲಂಬಿಸದೇ, ಸಬ್ ರಿಜಿಸ್ಟ್ರಾರ್ ಕಚೇರಿಗೂ ತೆರಳದೆ ಕುಳಿತಲ್ಲೇ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಪಡೆದುಕೊಳ್ಳುವ ವ್ಯವಸ್ಥೆ ರೂಪಿಸಲಾಗಿದ್ದು, ಶೀಘ್ರವೇ ಜಾರಿಯಾಗಲಿದೆ. ಕಾವೇರಿ-2 ತಂತ್ರಾಂಶದಡಿ ಈ ಸೇವೆ ಲಭ್ಯವಾಗಲಿದೆ.
ಮದುವೆಯಾದ ಬಗ್ಗೆ ದೃಢೀಕೃತ ಸಾಕ್ಷಾಧಾರ ಹೊಂದಿದ ಮಹತ್ವದ ಸರ್ಕಾರಿ ದಾಖಲೆಯಾಗಿರುವ ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಮುದ್ರಾಂಕ ಮತ್ತು ನೋಂದಣಿ ಇಲಾಖೆ ನೀಡುತ್ತದೆ. ಈ ಪ್ರಮಾಣ ಪತ್ರ ಸರ್ಕಾರದ ವಿವಿಧ ಸೇವೆ, ವಿಮೆ ಪರಿಹಾರ ಇತರೆ ಸೇವೆ ಪಡೆಯಲು ಪ್ರಮುಖ ದಾಖಲೆಯಾಗಿದೆ.