ಸಿಕ್ಕಿಂನ ಪಾಕ್ಯೊಂಗ್ ಜಿಲ್ಲೆಯ ರಾಂಗ್ ಪೋ ಪಟ್ಟಣದ ರಾಜಭವನದ ಚಳಿಗಾಲದ ಕ್ಯಾಂಪ್ ನಲ್ಲಿರುವ ತನ್ನ ಅಧಿಕೃತ ವಸತಿ ಕ್ವಾರ್ಟರ್ಸ್ ನಲ್ಲಿ ಹದಿಹರೆಯದ ಹುಡುಗಿಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಐಟಿಬಿಪಿ ಜವಾನನನ್ನು ಸಿಕ್ಕಿಂನ ಪೊಲೀಸರು ಬಂಧಿಸಿದ್ದಾರೆ. ನಂತರ ಬಾಲಕಿ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಬಾಲಕಿಯ ತಾಯಿ ತನ್ನ ಮಗಳ ಮೇಲೆ ಏಪ್ರಿಲ್ ನಿಂದ ಅರೆಸೇನಾ ಪಡೆ ಸಿಬ್ಬಂದಿ ಅತ್ಯಾಚಾರವೆಸಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಐಟಿಬಿಪಿ ಸಹಾಯಕ ಸಬ್ ಇನ್ ಸ್ಪೆಕ್ಟರ್ ರಾಂಗ್ ಪೋದಲ್ಲಿನ ರಾಜಭವನದ ಚಳಿಗಾಲದ ಕ್ಯಾಂಪ್ ನಲ್ಲಿರುವ ತನ್ನ ಕ್ವಾರ್ಟರ್ಸ್‌ನಲ್ಲಿ 13 ವರ್ಷದ ಬಾಲಕಿಯ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಉತ್ತರಾಖಂಡ್ ನ ಪಿಥೋರಗಢ್ ಜಿಲ್ಲೆಯ ಧಾರ್ಚುಲಾ ಮೂಲದ ಜವಾನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಸ್ಥಳೀಯ ಹದಿಹರೆಯದ ಹುಡುಗನಿಂದಲೂ ಲೈಂಗಿಕ ಕಿರುಕುಳ ನಡೆದಿದ್ದು, ಆತನನ್ನು ಸಹ ಬಂಧಿಸಲಾಗಿದೆ. ಇಬ್ಬರು ಆರೋಪಿಗಳಾದ ಐಟಿಬಿಪಿ ಜವಾನ್ ಮತ್ತು ಸ್ಥಳೀಯ ಹುಡುಗನ ನಡುವೆ ಏನಾದರೂ ಸಂಪರ್ಕವಿದೆಯೇ ಎಂದು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.