ಯುಟ್ಯೂಬ್ ಚಾನೆಲ್‌ಗಳ ಮೂಲಕ ಪ್ರಸಿದ್ಧಿ ಪಡೆದಿರುವ ಜನಸಾಮಾನ್ಯರಲ್ಲಿ ಜಾರ್ಖಂಡ್‌ನ ಟ್ರಕ್ ಚಾಲಕ ರಾಜೇಶ್ ಕೂಡ ಒಬ್ಬರು. ಅಡುಗೆ ವಿಡಿಯೋಗಳ ಮೂಲಕ ಇವರು ಸುಮಾರು 1.86 ಮಿಲಿಯನ್ ಅನುಯಾಯಿಗಳನ್ನು ಸಂಪಾದಿಸಿದ್ದಾರೆ. ಅಷ್ಟೇ ಅಲ್ಲ ತಿಂಗಳಿಗೆ ಇವರ ಗಳಿಕೆ ಸುಮಾರು 10 ಲಕ್ಷ ರೂಪಾಯಿ.
ಆರ್ ರಾಜೇಶ್ ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಲು ಕಾರಣವಾಗಿದ್ದು ಅಡುಗೆಯ ಬಗ್ಗೆ ಅವರಿಗಿದ್ದ ಪ್ರೀತಿ. ಇಂಟರ್‌ನೆಟ್‌ನಲ್ಲಿ ರಾಜೇಶ್ ಗಳಿಸಿರುವ ಯಶಸ್ಸು ಹೊಸ ಮನೆಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ರಾಜೇಶ್ ಈಗ ಸ್ವಂತ ಮನೆಯನ್ನು ನಿರ್ಮಿಸುತ್ತಿದ್ದಾರಂತೆ.
ಸಂದರ್ಶನವೊಂದರಲ್ಲಿ ರಾಜೇಶ್ ತಮ್ಮ ಸಾಧನೆಯ ಹಾದಿಯನ್ನು ಬಿಚ್ಚಿಟ್ಟಿದ್ದಾರೆ. ರಾಜೇಶ್ ಮೂಲತಃ ಲಾರಿ ಚಾಲಕ, ತಿಂಗಳಿಗೆ 25,000 ದಿಂದ 30,000 ರೂಪಾಯಿ ಸಂಪಾದಿಸುತ್ತಿದ್ದರು. ಮೊದಮೊದಲು ಯುಟ್ಯೂಬ್‌ಗಾಗಿ ಅಡುಗೆ ವಿಡಿಯೋ ಮಾಡುತ್ತಿದ್ದ ರಾಜೇಶ್ ವಾಯ್ಸ್‌ಓವರ್ ವೀಡಿಯೊವನ್ನು ಅಪ್‌ಲೋಡ್ ಮಾಡುತ್ತಿದ್ದರು. ಆದರೆ ವೀಕ್ಷಕರು ಮುಖ ತೋರಿಸುವಂತೆ ಕೇಳುತ್ತಿದ್ದರಂತೆ. ನಂತರ ಅಂತಹ ಮೊದಲ ವಿಡಿಯೋ ಹಾಕಿದಾಗ ಒಂದೇ ದಿನ 4.5 ಲಕ್ಷ ವೀಕ್ಷಣೆಗಳನ್ನು ಅದು ಗಳಿಸಿತ್ತು.
ಪ್ರತಿ ತಿಂಗಳು ಅವರು ಕನಿಷ್ಠ 4-5 ಲಕ್ಷ ರೂಪಾಯಿ ಗಳಿಸುತ್ತಾರೆ. ಅವರ ಗರಿಷ್ಠ ಸಂಪಾದನೆ 10 ಲಕ್ಷ. ಯುಟ್ಯೂಬ್ ಚಾನೆಲ್ ಆರಂಭಿಸಿದ ನಂತರವೂ ಲಾರಿ ಚಾಲನೆಯನ್ನು ನಿಲ್ಲಿಸಿಲ್ಲ. ಎರಡನ್ನೂ ನಿಭಾಯಿಸುತ್ತಿದ್ದಾರೆ. ಇಡೀ ಕುಟುಂಬ ರಾಜೇಶ್ ಆದಾಯವನ್ನೇ ಅವಲಂಬಿಸಿದೆ.