
ಪಾಕಿಸ್ತಾನದ ಗುರುದ್ವಾರ ಶ್ರೀ ಕರ್ತಾರ್ಪುರ ಸಾಹಿಬ್‌ನ ಪ್ರಸಾದದ ಪ್ಯಾಕೆಟ್‌ಗಳಲ್ಲಿ ಸಿಗರೇಟಿನ ಜಾಹೀರಾತುಗಳನ್ನು ಮುದ್ರಿಸಿದ ವಿಚಾರವನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ತೀವ್ರವಾಗಿ ಖಂಡಿಸಿದೆ.
ಸಿಖ್ಖರ ಉನ್ನತ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾದ ಶಿರೋಮಣಿ ಸಮಿತಿಯ ಅಧ್ಯಕ್ಷ ಹರ್ಜಿಂದರ್ ಸಿಂಗ್ ಈ ವಿಚಾರವಾಗಿ ಮಾತನಾಡಿ, ಪಾಕಿಸ್ತಾನ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
“ಈ ಘಟನೆಯಿಂದ ಸಿಖ್ ಯಾತ್ರಿಗಳಿಗೆ ನೋವಾಗಿದೆ. ಪಾಕಿಸ್ತಾನ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಹಾಗೂ ಪಾಕಿಸ್ತಾನ ಸರ್ಕಾರಗಳು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು,” ಎಂದು ಎಸ್‌ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಆಗ್ರಹಿಸಿದ್ದಾರೆ.
ಪ್ರಸಾದದ ಪ್ಯಾಕೆಟ್‌ನ ರ‍್ಯಾಪರ್‌ನ ಹೊರಗಡೆ ಗುರುದ್ವಾರ ಜನಮ್ ಆಸ್ತಾನ್ ಮತ್ತು ಗುರುದ್ವಾರ ಜ್ಯೋತಿ ಜೋತ್ ಆಸ್ತಾನ್, ಶ್ರೀ ಗುರು ನಾನಕ್ ದೇವ್, ಕರ್ತಾರ್ಪುರ್ ಸಾಹಿಬ್ ಚಿತ್ರಗಳಿದ್ದು, ಒಳಗೆ ’ಗೋಲ್ಡ್ ಸ್ಟ್ರೀಟ್ ಇಂಟರ್ನ್ಯಾಷನಲ್’ ಸಿಗರೇಟ್ ಬ್ರಾಂಡ್‌ನ ಜಾಹೀರಾತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪಿಎಂಯುನ ಸಿಇಓ ಮುಹಮ್ಮದ್ ಲತೀಫ್, ಈ ಪ್ಯಾಕೆಟ್‌ಗಳನ್ನು 2019ರಲ್ಲಿ ಮುದ್ರಿಸಲಾಗಿದ್ದು, ಈಗ ಪ್ರಸಾದಗಳನ್ನು ಅಂಥ ಪ್ಯಾಕೆಟ್‌ಗಳಲ್ಲಿ ವಿತರಣೆ ಮಾಡಲಾಗುತ್ತಿಲ್ಲ ಎಂದಿದ್ದಾರೆ.