ಗರ್ಭಕಂಠ ಕ್ಯಾನ್ಸರ್ ಗೆ ದೇಶದ ಮೊದಲ ಲಸಿಕೆಯ ಮಾರಾಟಕ್ಕೆ ಅನುಮತಿ ಕೋರಿ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ(SII) ಸಂಸ್ಥೆಯು ಭಾರತೀಯ ಪ್ರಧಾನ ಔಷಧ ನಿಯಂತ್ರಕ(DCGI) ಸಂಸ್ಥೆಗೆ ಮನವಿ ಮಾಡಿದೆ.
ಎಲ್ಲವೂ ಅಂದುಕೊಂಡಂತೆ ಆದಲ್ಲಿ ಸೀರಂ ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೊದಲ ಕ್ವಾಡ್ರಿವಾಲೆಂಟ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ ವಾಕ್ಸಿನ್ (qHPV) ಗರ್ಭಕಂಠ ಕ್ಯಾನ್ಸರ್ ನಿಂದ ಬಳಲುತ್ತಿರುವ ಅನೇಕ ಮಹಿಳೆಯರಿಗೆ ವರದಾನವಾಗಲಿದೆ.
ಪುಣೆ ಮೂಲದ ಈ ಸಂಸ್ಥೆಯು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಈ ಲಸಿಕೆಯ 2/3 ಹಂತದ ಕ್ಲಿನಿಕಲ್ ಪ್ರಯೋಗವನ್ನು ನಡೆಸಿ ಯಶಸ್ವಿಯಾಗಿದೆ. ಈ ಲಸಿಕೆಯು ಎಲ್ಲಾ ಬಗೆಯ ಎಚ್ ಪಿ ವಿ ಮಾದರಿಗಳು ಮತ್ತು ಎಲ್ಲಾ ಡೋಸ್ ಗಳಿಗಿಂತ ಇತರೆ ಔಷಧಿಗಳಿಗಿಂತ 1000 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಸೀರಂ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರತಿ ವರ್ಷ ಲಕ್ಷಾಂತರ ಮಹಿಳೆಯರು ಗರ್ಭಕಂಠ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಇವರಲ್ಲಿ ಸಾವಿನ ಪ್ರಮಾಣವು ಅಧಿಕವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಭಾರತದಲ್ಲಿ ಮಹಿಳೆಯರಲ್ಲಿ ಕಂಡು ಬರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಇದು 15 ರಿಂದ 44 ವರ್ಷ ವಯೋಮಾನದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರನ್ನು ಈ ಮಾರಕ ರೋಗದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಇತರೆ ಜೀವ ಉಳಿಸುವ ಲಸಿಕೆಗಳ ರೀತಿಯಲ್ಲಿ ಕ್ಯುಎಚ್ ಪಿವಿ ದೇಶೀಯ ಲಸಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ದೇಶವನ್ನು ಆತ್ಮ ನಿರ್ಭರವನ್ನಾಗಿಸುವುದಕ್ಕೆ ಬದ್ಧರಾಗಿದ್ದೇವೆ ಎಂದು ಸಿಂಗ್ ಡಿಸಿಜಿಐಗೆ ಅನುಮತಿ ಕೋರಿ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಹ್ಯೂಮನ್ ಪ್ಯಾಪಿಲೋಮವೈರಸ್ (ಟೈಪ್ 6, 11, 16 ಮತ್ತು 18) ಲಸಿಕೆ ಮರುಸಂಯೋಜಕದಿಂದ ಉಂಟಾಗುವ ಕ್ಯಾನ್ಸರ್ ಅನ್ನು ತಡೆಗಟ್ಟುವುದನ್ನು ಖಚಿತಪಡಿಸುತ್ತದೆ ಎಂದು ಸಿಂಗ್ ಭರವಸೆ ನೀಡಿದ್ದಾರೆ.