ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಶೇರಾಪುರದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ 49.11 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ದಿಪಡಿಸಲಾಗುತ್ತಿರುವ ವಸತಿ ಯೋಜನೆ ಕಾಮಗಾರಿ ಇನ್ನು 6 ತಿಂಗಳಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಭಾನುವಾರ ಹರಿಹರ ತಾಲ್ಲೂಕಿನ ಶೇರಾಪುರ ಪ್ರದೇಶದಲ್ಲಿ ನಡೆಯುತ್ತಿರುವ ನಿವೇಶನ ಕಾಮಗಾರಿಯನ್ನು ಸಂಸದರು, ಶಾಸಕರೊಂದಿಗೆ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಶೇರಾಪುರದಲ್ಲಿ ಅಭಿವೃದ್ದಿಪಡಿಸಲಾಗುತ್ತಿರುವ ಲೇಔಟ್ ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಸಂಸದರು, ಶಾಸಕರ ಸಮ್ಮುಖದಲ್ಲಿ ಉದ್ಘಾಟಿಸಲಾಗುವುದು ಎಂದರು.
ಕರ್ನಾಟಕ ಗೃಹ ಮಂಡಳಿ ವತಿಯಿಂದ ಹರಿಹರ ತಾಲ್ಲೂಕಿನ ಶೇರಾಪುರದಲ್ಲಿ ಸುಮಾರು 49 ಎಕರೆ 11 ಗುಂಟೆ ವಿಸ್ತೀರ್ಣದಲ್ಲಿ ನಿವೇಶನ ಮತ್ತು ವಸತಿ ಸಮುಚ್ಚಯ ನಿರ್ಮಿಸಲು ಲೇಔಟ್ ಅಭಿವೃದ್ದಿಪಡಿಸಲಾಗುತ್ತಿದೆ. ಮೈಸೂರಿನ ಗುತ್ತಿಗೆದಾರರು ಸುಮಾರು ರೂ.25.05 ಕೋಟಿ ಮೊತ್ತದಲ್ಲಿ 2021 ರ ಜನವರಿ 18 ರಿಂದ ಈ ನಿವೇಶನಗಳನ್ನು ಅಭಿವೃದ್ದಿಪಡಿಸುವ ಕಾಮಗಾರಿಯನ್ನು ಕೈಗೊಂಡಿದ್ದಾರೆ. ಡಿಸೆಂಬರ್ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ.
ಈ ಪ್ರದೇಶದಲ್ಲಿ 20*30, 30*40, 60*40 ವಿಸ್ತೀರ್ಣದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವವರು, ಸ್ಥಳೀಯರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ 20*30 ರ ನಿವೇಶನಗಳನ್ನು ಅರ್ಧ ದರಕ್ಕೆ ಹಂಚಿಕೆ ಮಾಡಲಾಗುವುದು. ಸೇವಾ ಉದ್ದೇಶದಿಂದ ನಿವೇಶನ ಅಭಿವೃದ್ದಿಸಲಾಗುತ್ತಿದ್ದು, 24*7 ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗುವುದು. ಇದೊಂದು ಪ್ರತಿಷ್ಟಿತ ಬಡಾವಣೆಯಾಗಲಿದ್ದು ಒಟ್ಟು 650 ನಿವೇಶನಗಳನ್ನು ಮಾಡಲಾಗುವುದು. ಆದರೆ ಈಗಾಗಲೇ 33 ಸಾವಿರ ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದರು.
ಕಾನೂನು ಚೌಕಟ್ಟಿನಲ್ಲೇ ನಿಯಮಾನುಸಾರ ಲೇಔಟ್ ಅಭಿವೃದ್ದಿಪಡಿಸಲಾಗುತ್ತಿದೆ. ಆದರೆ, ಅಕ್ಕಪಕ್ಕದ ಕೆಲ ರೈತರು ತಮ್ಮ ತೋಟ ಮತ್ತು ಹೊಲಗಳಿಗೆ ಲೇಔಟ್ ಎತ್ತರವಾಗುವ ಕಾರಣ ತಮ್ಮ ಜಮೀನಿನಲ್ಲಿ ಮಳೆ ನೀರು ನಿಂತು ಶೀತಬಾಧೆ ಕಾಡಲಿದೆ. ಆದ ಕಾರಣ ಕಾಲುವೆ ನಿರ್ಮಿಸಿ ನೀರು ಹೋಗುವಂತೆ ವ್ಯವಸ್ಥೆ ಮಾಡಿಕೊಡಲು ಮನವಿ ಮಾಡಿದ್ದಾರೆ. ಆ ಪ್ರಕಾರವೇ ಅಕ್ಕಪಕ್ಕದ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.
ಲೇಔಟ್ ವ್ಯಾಪ್ತಿಯಲ್ಲಿ ರಸ್ತೆ, ಪಾರ್ಕುಗಳು, ಅಂಗನವಾಡಿ ಕೇಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಶಾಲೆಯನ್ನೂ ತೆರೆಯಲು ಕ್ರಮ ವಹಿಸಲು ಸೂಚಿಸಿದ್ದೇನೆ ಎಂದ ಅವರು ಕರ್ನಾಟಕ ಗೃಹ ಮಂಡಳಿ, ರಾಜೀವ್ ಗಾಂಧಿ ಆವಾಸ್ ಯೋಜನೆ, ಕೊಳಚೆ ಅಭವೃದ್ದಿ ಮಂಡಳಿಯಡಿ ವಸತಿ ಯೋಜನೆಗಳಿಗೆ ಚಾಲನೆ ಸಿಕ್ಕಿದ್ದು ಕೆಲಸಗಳು ಆಗುತ್ತಿವೆ ಎಂದರು.
ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ, ಹರಿಹರ ಕ್ಷೇತ್ರದ ಶಾಸಕರಾದ ರಾಮಪ್ಪ, ಮಾಜಿ ಶಾಸಕ ಬಿ.ಪಿ.ಹರೀಶ್, ಕರ್ನಾಟಕ ಗೃಹ ಮಂಡಳಿಯ ಮುಖ್ಯ ಅಭಿಯಂತರ ನಂಜುಂಡಸ್ವಾಮಿ ಟಿ.ಡಿ, ಕಾರ್ಯಪಾಲಕ ಅಭಿಯಂತರ ರವೀಂದ್ರ ಎಸ್.ಎನ್, ಜ್ಯೂನಿಯರ್ ಇಂಜಿನಿಯರ್ ಪ್ರಿಯಾ.ಕೆ.ಎ, ಇತರೆ ಅಧಿಕಾರಿಗಳು ಹಾಜರಿದ್ದರು.