ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ವತಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಪಡಿಸಲಾದ ಬಡಾವಣೆಗಳಲ್ಲಿ 6 ಸಾವಿರ ನಿವೇಶನ ಮತ್ತು ಮನೆಗಳನ್ನು ಒಂದು ತಿಂಗಳೊಳಗೆ ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ 65 ಸ್ಥಳಗಳಲ್ಲಿ ಕೈಗೆತ್ತಿಕೊಂಡ ಯೋಜನೆಗಳಡಿ ಈ ಮನೆ, ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದರು.
ಆಯಾ ಬಡಾವಣೆಗಳಲ್ಲಿಯೇ ನಿವೇಶನ ಕೋರಿ ಬಂದ ಅರ್ಜಿಗಳನ್ನು ಲಾಟರಿಯ ಮೂಲಕ ಆಯ್ಕೆ ಮಾಡಿ ನಿವೇಶನ ಹಂಚಿಕೆ ಮಾಡಲಾಗುವುದು. ಮೈಸೂರಿನ ನಿಸರ್ಗ ಬಡಾವಣೆಯಲ್ಲಿ 523 ನಿವೇಶನ ಅಭಿವೃದ್ಧಿಪಡಿಸಲಾಗಿದೆ. ಇದೇ ರೀತಿ ಬಳ್ಳಾರಿ, ಹರಿಹರ, ವಿಜಯಪುರ, ಗದಗ, ಹುನಗುಂದ ಸೇರಿದಂತೆ ಹಲವು ಕಡೆಗಳಲ್ಲಿ ಬಡಾವಣೆಗಳನ್ನು ನಿರ್ಮಿಸಿ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಒಟ್ಟು 6015 ನಿವೇಶನ ಮತ್ತು 20 ಮನೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.