ಬೆಂಗಳೂರು: ಎಲ್.ವಿ. ಟ್ರಾವೆಲ್ಸ್ ನ 15 ಸಿಬ್ಬಂದಿಗೆ ಮಾಲೀಕರು 15 ನಿವೇಶನಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲತ್ತಹಳ್ಳಿಯ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ 15 ವರ್ಷಗಳಿಂದ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿ ದುಡಿದ 15 ಟ್ರಾವೆಲ್ ಮೇಲ್ವಿಚಾರಕರಿಗೆ 34 ಲಕ್ಷ ರೂ. ಮೌಲ್ಯದ ನಿವೇಶನ ವಿತರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎಲ್.ವಿ. ಟ್ರಾವೆಲ್ಸ್ ಮಾಲೀಕ ಪರಮಶಿವಯ್ಯ, ನಿಷ್ಠಾವಂತ ಕಾರ್ಮಿಕರೇ ಉದ್ಯಮದ ಮೂಲ ಬಂಡವಾಳ. ಅವರ ಸಹಕಾರವಿಲ್ಲದೆ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಮಾಲೀಕರು ಮತ್ತು ಕಾರ್ಮಿಕ ವರ್ಗ ಒಟ್ಟಾಗಿ ದುಡಿದರೆ ಸಂಸ್ಥೆ ಲಾಭದಾಯಕವಾಗಿ ಮುಂದುವರೆಯಲು ಸಾಧ್ಯವಿದೆ. ಈ ಲಾಭಾಂಶದಲ್ಲಿ ಸಂಸ್ಥೆಯ ನೌಕರರಿಗೆ ಹಾಲು ಸಿಗಬೇಕಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿಗಳಿಗೆ ಸೊಂಡೆಕೊಪ್ಪ ಗ್ರಾಮದಲ್ಲಿ ನಿವೇಶನಗಳನ್ನು ಹಂಚುವ ಮೂಲಕ ವಸತಿ ಭದ್ರತೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.