ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ 60 ಸಾವಿರ ಜನರಿಗೆ ಒಂದೇ ಕಂತಿನಲ್ಲಿ ಕ್ರಯ ಪತ್ರ ವಿತರಿಸಲು ಸರ್ಕಾರ ಮುಂದಾಗಿದೆ.
ಅಧಿಕೃತ ನೆಲೆ, ಊರು, ವಿಳಾಸ ದೊರಕಿಸಿ ಕೊಡುವ ಕೆಲಸಕ್ಕೆ ಸರ್ಕಾರ ಮುಂದಾಗಿ ಕ್ರಾಂತಿಕಾರಿ ಕ್ರಮ ಕೈಗೊಂಡಿದ್ದು, ನವೆಂಬರ್ ಕೊನೆಯ ವಾರದಲ್ಲಿ ಗೊಲ್ಲರಹಟ್ಟಿ, ಕುರುಬರಹಟ್ಟಿ, ಲಂಬಾಣಿ ತಾಂಡಾಗಳಿಗೆ ಸೇರಿದ 60 ಸಾವಿರ ಜನರಿಗೆ ಕ್ರಯ ಪತ್ರ ನೀಡಲಾಗುವುದು.
ಕಂದಾಯ ಸಚಿವ ಆರ್. ಅಶೋಕ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 3300 ಲಂಬಾಣಿ ತಾಂಡಾಗಳು, ಕುರುಬರಹಟ್ಟಿ, ಗೊಲ್ಲರಹಟ್ಟಿ ಸೇರಿದಂತೆ 500 ಅಲೆಮಾರಿ ವಾಸ ಸ್ಥಳಗಳಿದ್ದು, ಇವುಗಳಿಗೆ ಹೆಸರುಗಳಿಲ್ಲ. ವಿಳಾಸಗಳು ಇಲ್ಲ. ಇವುಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ಬೇಡಿಕೆ ಇದ್ದು, ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ. ಇಂತಹ 60 ಸಾವಿರ ಕುಟುಂಬಗಳಿಗೆ ಕ್ರಯ ಪತ್ರ ಒದಗಿಸಲಾಗುವುದು. ಇಂತಹ ಜನ ವಾಸವಾಗಿರುವ ಜಾಗದ ಸರ್ವೆ ಮಾಡಿ ವಿವರ ಪಡೆದು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿ ಕ್ರಯ ಪತ್ರ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ರೆವಿನ್ಯೂ ನಿವೇಶನಗಳ ಭೂ ಪರಿವರ್ತನೆ ಮಾಡಿಕೊಡಲು ಕಾನೂನು ತೊಡಕು ಇಲ್ಲವೆಂದು ಕಾನೂನು ಇಲಾಖೆ ತಿಳಿಸಿದ್ದು, ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ರೆವಿನ್ಯೂ ನಿವೇಶನಗಳ ಭೂ ಪರಿವರ್ತನೆಗೆ ಅವಕಾಶ ನೀಡಿದರೆ ಮನೆ ಕಟ್ಟಿಕೊಂಡವರಿಗೆ ಮತ್ತು ಕಟ್ಟಿಕೊಳ್ಳುವವರಿಗೆ ಸಾಲದ ಸೌಲಭ್ಯ ದೊರೆಯುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಅಶೋಕ್ ಹೇಳಿದ್ದಾರೆ.