ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಬುಡಾ ವ್ಯಾಪ್ತಿಯಲ್ಲಿ ಬರುವ 52 ನಿವೇಶನಗಳನ್ನು 2021ರ ಜ.11 ರಂದು ಬಹಿರಂಗ ಹರಾಜು ಮಾಡಲು ತೀರ್ಮಾನಿಸಲಾಗಿದೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಹೇಳಿದ್ದಾರೆ.
ನಗರದ ಬುಡಾ ಕಚೇರಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ 52 ವಾಸಯೋಗ್ಯ ಮೂಲೆ/ ಬಿಡಿ ನಿವೇಶನಗಳು, ವರ್ಕ್ ಶಾಪ್ ವಾಣಿಜ್ಯ ನಿವೇಶನಗಳು ಹಾಗೂ ಖಾಲಿ ಜಾಗಗಳು ಬಹಿರಂಗ ಹರಾಜಿನ ಮೂಲಕ ಸಾರ್ವಜನಿಕರಿಗೆ ಹಂಚಿಕೆ ಮಾಡಲು ಸಭೆಯಲ್ಲಿ ಅನುಮೋದಿಸಲಾಯಿತು.
ನಗರದ ರಾಘವೇಂದ್ರ ಕಾಲೋನಿ 2 ನೇ ಹಂತದ 26 ವಾಸಯೋಗ್ಯ ನಿವೇಶನಗಳು, ಶ್ರೀ ಕನಕದುರ್ಗಮ್ಮ ಬಡಾವಣೆಯಲ್ಲಿರುವ 01 ವಾಸಯೋಗ್ಯ ನಿವೇಶನ, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 07 ವಾಸಯೋಗ್ಯ ನಿವೇಶನಗಳು ಹಾಗೂ ವಾಣಿಜ್ಯ ನಿವೇಶನ 01, ಡಾ.ಸರ್.ಎಂ.ವಿ.ಲಾರಿ ತಂಗುದಾಣ ವರ್ಕ್ ಶಾಪ್ ವಾಣಿಜ್ಯ ನಿವೇಶನಗಳು -11, ಕುವೆಂಪುನಗರದಲ್ಲಿ 03 ವಾಸಯೋಗ್ಯ ನಿವೇಶನಗಳು, ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿ 3 ಖಾಲಿ ಜಾಗಗಳನ್ನು ಜನವರಿ 11 ರಂದು ಹರಾಜು ಮೂಲಕ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಬಿ.ಗೋನಾಳ್ ಗ್ರಾಮದಲ್ಲಿ ಪ್ರಾಧಿಕಾರ ಮತ್ತು ರೈತರ ಸಹಭಾಗಿತ್ವದಲ್ಲಿ 101.98 ಎಕರೆ ಜಮೀನಿನಲ್ಲಿ 50:50 ಅನುಪಾತದಂತೆ, ಪ್ರಾಧಿಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಸತಿ ಬಡಾವಣೆಯನ್ನು ನಿರ್ಮಿಸಲು ಇ-ಟೆಂಡರ್ ಪ್ರಾಕ್ಯೂಮೆಂಟ್ ಮುಖಾಂತರ ಟೆಂಡರ್ ಆಹ್ವಾನಿಸುವ ಕುರಿತು ಸಭೆಯಲ್ಲಿ ಅನುಮೋದಿಸಲಾಗಿದೆ.
ಶೀಘ್ರವೇ ಪ್ರೊಕ್ರೂಮೆಂಟ್ ಮೂಲಕ ಟೆಂಡರ್ ಆಹ್ವಾನಿಸಲಾಗುತ್ತದೆ ಎಂದು ಹೇಳಿದ ಅವರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 20 ಜಾಹೀರಾತು ಫಲಕಗಳಿಗೆ ಪ್ರತಿಯೊಂದಕ್ಕೆ 10 ಲಕ್ಷ ರೂ. ನಿರ್ಮಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಭೆಯಲ್ಲಿ ಕೈಗಾರಿಕೆ ಬಹುನಿವೇಶನ ವಿನ್ಯಾಸ ನಕ್ಷೆ ಅನುಮೋದನೆ, ಖಾಸಗಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು, ಜಮೀನುಗಳಿಗೆ ಭೂ-ಉಪಯೋಗ ಬದಲಾವಣೆಗೆ ಅನುಮೋದನೆ ನೀಡುವ ಬಗ್ಗೆ, ವಸತಿ ವಿನ್ಯಾಸ ನಕ್ಷೆ ಮಂಜೂರಾತಿ ಕೋರಿರುವ ಅರ್ಜಿಗಳು, ಏಕ ನಿವೇಶನ ವಸತಿ ವಿನ್ಯಾಸ ಕೋರಿ ಮನವಿ, ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆ ಮಂಜೂರು ಕೋರಿರುವ ಅರ್ಜಿಗಳಿಗೆ ಅನುಮೋದನೆ ನೀಡುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವೀರೇಂದ್ರ ಕುಂದಗೋಳ, ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ರವಿಶಂಕರ್ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಇದ್ದರು.