ಕಲಬುರಗಿ: ಶಹಾಬಾದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಂದೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಹತ್ತಿರವಿರುವ ಹಾಗೂ ಪ್ರಸ್ತಾವಿತ ಎರಡನೇ ರಿಂಗ್ ರೋಡ್ ಸಮೀಪದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುತ್ತಿರುವ ಕುಸನೂರ ವಸತಿ ಯೋಜನೆಯಲ್ಲಿ ನಿವೇಶನ ಹಂಚಿಕೆಗೆ ಅರ್ಜಿಗಳ ವಿತರಣೆಗೆ ಶನಿವಾರ ಚಾಲನೆ ನೀಡಲಾಯಿತು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮತ್ತು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅವರು ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ನಿವೇಶನ ಹಂಚಿಕೆಗೆ ಅರ್ಜಿ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಕಲಬುರಗಿ ನಗರದ ವಸತಿ ರಹಿತ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.
ಉನ್ನತೀಕರಣಗೊಳಿಸಿ ನವೀಕರಣಗೊಂಡ ಪ್ರಾಧಿಕಾರದ ಸಭಾಂಗಣದ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ದತ್ತಾತ್ರೇಯ ಪಾಟೀಲ ಅವರು, ಕೆ.ಕೆ.ಆರ್.ಡಿ.ಬಿ.ಯಿಂದ ಕಲಬುರಗಿ ನಗರದಲ್ಲಿ ಸುಂದರವಾದ ನೂತನ ಮಾದರಿಯ ಕಾಯಿಪಲ್ಯೆ ಮಾರುಕಟ್ಟೆಯನ್ನು ನಿರ್ಮಿಸಲು ಪ್ರಾಧಿಕಾರ ಸಿದ್ಧಪಡಿಸಿದ ನೀಲಿ ನಕ್ಷೆಯನ್ನು ವೀಕ್ಷಿಸಿ ಕೂಡಲೇ ಕಾಮಗಾರಿ ಕೈಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಶ್ರೀ ಶರಣಬಸವೇಶ್ವರ ಅಪ್ಪಾ ಕೆರೆಯನ್ನು ಅಭಿವೃದ್ಧಿಗೊಳಿಸಲು ತೆಗೆದುಕೊಂಡ ಕ್ರಮದ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾದ ವಿವಿಧ ವಸತಿ ಯೋಜನೆಗಳಲ್ಲಿ ಸಂಘ ಸಂಸ್ಥೆಯವರಿಗೆ ಹಂಚಿಕೆಯಾದ ಸಿ.ಎ.ನಿವೇಶನಗಳ ಹಂಚಿಕೆ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್, ಆಯುಕ್ತ ಎಂ. ರಾಚಪ್ಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.