ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದಲ್ಲಿ ಜನವರಿ 14 ಮತ್ತು 15ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ.
ಜಾತ್ರಾ ಮಹೋತ್ಸವಕ್ಕೆ ಆರ್ಯ ಈಡಿಗ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ ಚಾಲನೆ ನೀಡಲಿದ್ದು, ಜನವರಿ 14ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಮಹಾಭಿಷೇಕ, ಅಲಂಕಾರ, ಆಭರಣ ಪೂಜೆ, ಚಂಡಿಕಾ ಹೋಮ ನಡೆಯಲಿದೆ.
ಬೆಳಿಗ್ಗೆ 8 ಗಂಟೆಗೆ ರಥಪೂಜೆಯೊಂದಿಗೆ ಚೌಡೇಶ್ವರಿ ದೇವಿ ಮೂಲ ಸ್ಥಾನಕ್ಕೆ ಹೊರಡಲಿದ್ದು, ಕೇರಳದ ಶಿವಗಿರಿ ಬ್ರಹ್ಮಶ್ರೀ ನಾರಾಯಣ ಗುರು ಮಠದ ಪೀಠಾಧಿಪತಿ ಸಚ್ಚಿದಾನಂದ ಸ್ವಾಮೀಜಿ, ಸೀಗೆ ಕಣಿವೆಯಲ್ಲಿ ಧರ್ಮ ಜ್ಯೋತಿಗೆ ಚಾಲನೆ ನೀಡಲಿದ್ದಾರೆ.
ಬಳಿಕ ಮಧ್ಯಾಹ್ನ 12 ಗಂಟೆಗೆ ಧರ್ಮಜ್ಯೋತಿ, ದೇಗುಲ ಪ್ರವೇಶ ಮಾಡಲಿದ್ದು ಈ ಸಂದರ್ಭದಲ್ಲಿ ರಂಭಾಪುರಿ ಮಹಾಸಂಸ್ಥಾನ ಮಳಲಿ ಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾತ್ರಿ 9:30ಕ್ಕೆ ಸಿಗಂದೂರು ಮೇಳದಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಇನ್ನು ಜನವರಿ 15ರಂದು ಬೆಳಗ್ಗೆ 5:00 ಗಂಟೆಯಿಂದ ನವ ಚಂಡಿಕಾ ಹೋಮ ನಡೆಯಲಿದ್ದು, ರಾತ್ರಿ 8 ಗಂಟೆಗೆ ಗುರು ಪೂಜೆ, ದುರ್ಗಾ ದೀಪ ನಮಸ್ಕಾರ, ದೇವಿ ಪಾರಾಯಣ ಮೊದಲಾದವುಗಳು ನಡೆಯಲಿದೆ. ಅಲ್ಲದೆ ಜಾತ್ರೆ ಅಂಗವಾಗಿ ಜನವರಿ 14 ಹಾಗೂ 15ರಂದು ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.