
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊಳೆಬಾಗಿಲಿನಲ್ಲಿ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಸಿಗಂದೂರು ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಮಲೆನಾಡು ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಈ ಸೇತುವೆ, ಈ ಭಾಗದ ಜನರ ಬಹುದಿನಗಳ ಕನಸನ್ನು ನನಸಾಗಿಸಲಿದೆ. ಶನಿವಾರ ಸೇತುವೆಯ ಕೊನೆಯ ಸೆಗ್ಮೆಂಟ್ ಜೋಡಣೆಗೆ ಪೂಜೆ ಸಲ್ಲಿಸಲಾಯಿತು. ಸೆಗ್ಮೆಂಟ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಕೇಬಲ್, ಲೈಟಿಂಗ್ ಮತ್ತು ಸೇತುವೆ ಮೇಲ್ಭಾಗದಲ್ಲಿ ರಸ್ತೆ ಡಾಂಬರೀಕರಣದಂತಹ ಅಂತಿಮ ಹಂತದ ಕಾಮಗಾರಿಗಳು ಮಾತ್ರ ಬಾಕಿ ಉಳಿದಿವೆ.
ಸೇತುವೆಯ ಉಸ್ತುವಾರಿ ಎಂಜಿನಿಯರ್ ಪೀರ್ ಪಾಷ ಅವರ ಪ್ರಕಾರ, ಮುಂದಿನ ಎರಡು ತಿಂಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ಜೂನ್ ಮೊದಲ ವಾರದಲ್ಲಿ ಸೇತುವೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು. ಅಂಬಾರಗೊಡ್ಲು 200 ಮೀಟರ್ ರಸ್ತೆ ಕಾಮಗಾರಿಯೂ ಪ್ರಾರಂಭವಾಗಿದೆ.
ಈ ಸೇತುವೆ ಕೇವಲ ಸಾರಿಗೆ ಸಂಪರ್ಕಕ್ಕೆ ಸೀಮಿತವಾಗಿಲ್ಲ. ಇದು ಈ ಪ್ರದೇಶದ ಜನರ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತರಲಿದೆ. ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ, ಈ ಭಾಗದ ಜನರ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಕೊಲ್ಲೂರು ಮತ್ತು ಸಿಗಂದೂರು ದೇಗುಲಗಳಿಗೆ ಭೇಟಿ ನೀಡುವ ಭಕ್ತರಿಗೆ ಇದು ವರದಾನವಾಗಲಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ. ಈ ಸೇತುವೆ ದೇಶದ ಕೇಬಲ್ ಆಧಾರಿತ ಸೇತುವೆಗಳಲ್ಲಿ 7ನೇ ಅತಿದೊಡ್ಡ ಸೇತುವೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಸೇತುವೆಯ ಉದ್ದ 2.14ಕಿಲೋಮೀಟರ್ ಹಾಗೂ 16 ಮೀಟರ್ ಅಗಲ ಇರಲಿದೆ.
ಈ ಸೇತುವೆಯು ಸಾಗರದಿಂದ ಸಿಗಂದೂರು ಅಥವಾ ತುಮರಿಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸುವ ದೂರವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ. ಪ್ರಸ್ತುತ ಲಾಂಚ್ ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯತೆ ತಪ್ಪಲಿದೆ. ಪ್ರತಿದಿನ ಸಾವಿರಾರು ಭಕ್ತರು ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಭೇಟಿ ನೀಡುತ್ತಿದ್ದು, ಈ ಸೇತುವೆ ಅವರೆಲ್ಲರಿಗೂ ಅನುಕೂಲವಾಗಲಿದೆ. ಕೇಂದ್ರ ಸರ್ಕಾರವು 464.23 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಿಸುತ್ತಿದ್ದು, ಸೇತುವೆ ನಿರ್ಮಾಣದಿಂದ ಈ ಭಾಗದ ಜನರ ಬಹುದಿನಗಳ ಕನಸು ನನಸಾಗಲಿದೆ.