ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಬೇಕಿದ್ದ ಕಳಸವಳ್ಳಿ – ಸಿಗಂದೂರು ಸೇತುವೆ ಕಾಮಗಾರಿ ವಿವಿಧ ಕಾರಣಗಳಿಗೆ ವಿಳಂಬವಾಗಿದ್ದು, ಹೀಗಾಗಿ ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ.
ಭಾನುವಾರದಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಈ ಮಾಹಿತಿ ನೀಡಿದ್ದು, ಅತಿವೃಷ್ಟಿ ಹಾಗು ಅನಾವೃಷ್ಟಿ ಕಾರಣಕ್ಕೆ ಶರಾವತಿ ಹಿನ್ನೀರು ಪ್ರದೇಶದಲ್ಲಿ ನೀರಿನ ಪ್ರಮಾಣ ಹೆಚ್ಚು ಕಡಿಮೆಯಾದ ಹಿನ್ನೆಲೆಯಲ್ಲಿ ಸಾಮಗ್ರಿ ಸಾಗಿಸಲು ಸಾಧ್ಯವಾಗದ್ದರಿಂದ ಸೇತುವೆ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಜನವರಿ 2ನೇ ಅಥವಾ 3ನೇ ವಾರದಲ್ಲಿ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಸೇತುವೆ ಕಾಮಗಾರಿಗೆ ವೇಗ ನೀಡುವ ಕುರಿತಂತೆ ಚರ್ಚೆ ನಡೆಸಲಾಗುತ್ತದೆ. ಬಹುತೇಕ ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಸಿಗಂದೂರು ಸೇತುವೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.