ನವದೆಹಲಿ: ಮೇ 29 ರಂದು ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಅಲಿಯಾಸ್ ಸಿಧು ಮೂಸೆವಾಲಾ ಅವರನ್ನು ಕೊಂದ ಶೂಟರ್ ಗಳಿಗೆ ಸಹಕಾರ ನೀಡಿದ್ದ ಕನಿಷ್ಠ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೇ 29 ರಂದು ಸಂಜೆ 4.30 ರ ಸುಮಾರಿಗೆ ಗುರ್ವಿಂದರ್ ಸಿಂಗ್(ನೆರೆಹೊರೆಯವರು) ಮತ್ತು ಗುರುಪ್ರೀತ್ ಸಿಂಗ್ (ಸೋದರಸಂಬಂಧಿ) ಅವರೊಂದಿಗೆ ಮನೆಯಿಂದ ಹೊರಬಂದ ಮೂಸೆವಾಲಾ ಅವರನ್ನು ಕೆಲವು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದರು. ಅವರು ತಮ್ಮ ಬುಲೆಟ್ ಪ್ರೂಫ್ ಅಲ್ಲದ ಮಹೀಂದ್ರ ಥಾರ್ ವಾಹನವನ್ನು ಚಲಾಯಿಸುತ್ತಿದ್ದ ವೇಳೆಯಲ್ಲಿ ದುಷ್ಕರ್ಮಿಗಳು ಗುಂಡಿನ ಮಳೆ ಸುರಿಸಿದ್ದರು.
ಮೂಸ್ವಾಲಾ ಅವರ ಕೊಲೆಗೆ ನಿಮಿಷಗಳ ಮೊದಲು ಮನೆಯಿಂದ ಹೊರಡುತ್ತಿದ್ದಾಗ ಅವರೊಂದಿಗೆ ಹರಿಯಾಣದ ಸಿರ್ಸಾದ ಸಂದೀಪ್ ಸಿಂಗ್ ಅಲಿಯಾಸ್ ಕೆಕ್ಡಾ ಸೆಲ್ಫಿ ಕ್ಲಿಕ್ಕಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನೂ ಸೇರಿ 8 ಮಂದಿಯನ್ನು ಬಂಧಿಸಲಾಗಿದೆ. ಅಪರಾಧದಲ್ಲಿ ಭಾಗಿಯಾಗಿರುವ ನಾಲ್ವರು ಶೂಟರ್ ಗಳನ್ನು ಪೊಲೀಸರು ಗುರುತಿಸಿದ್ದಾರೆ ಎಂದು ಪಂಜಾಬ್ ಪೊಲೀಸ್ ವಕ್ತಾರರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.