ಪ್ರತಿಯೊಬ್ಬರೂ ನಿಯಮಿತವಾಗಿ ವಾಕಿಂಗ್ ಮಾಡಬೇಕು. ಇದು ದೈಹಿಕ ಹಾಗೂ ಮಾನಸಿಕ ಎರಡೂ ಆರೋಗ್ಯವನ್ನು ಕಾಪಾಡುತ್ತದೆ. ಗರ್ಭಿಣಿಯರು ಕೂಡ ವಾಕಿಂಗ್ ಮಾಡಬೇಕೆಂದು ಸಲಹೆ ನೀಡಲಾಗುತ್ತದೆ. ಇದು ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗೆ ಕಠಿವಾಣ ಹಾಕುತ್ತದೆ. ಇದಲ್ಲದೆ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ವಾಕಿಂಗ್ ಒಳ್ಳೆಯದು ಎನ್ನುವ ಕಾರಣಕ್ಕೆ ಮಿತಿಮೀರಿ ವಾಕಿಂಗ್ ಮಾಡೋದು ಗರ್ಭಿಣಿಯರಿಗೆ ಒಳ್ಳೆಯದಲ್ಲ.
ಗರ್ಭಿಣಿಯರು ಎಷ್ಟು ವಾಕಿಂಗ್ ಮಾಡಬೇಕು ಎಂಬುದನ್ನು ತಿಳಿದಿರಬೇಕು. ಅತಿಯಾದ ನಡಿಗೆ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಗರ್ಭಿಣಿ ಪ್ರತಿ ವಾರ ಸುಮಾರು 150 ನಿಮಿಷಗಳ ಮಧ್ಯಮ ತೀವ್ರತೆಯ ಏರೋಬಿಕ್ ವ್ಯಾಯಾಮ ಮಾಡಬೇಕು. ಇದರಲ್ಲಿ ವೇಗದ ನಡಿಗೆಯೂ ಸೇರಿದೆ. ಗರ್ಭಿಣಿ ವಾರದಲ್ಲಿ ಐದು ದಿನ 30 ನಿಮಿಷ ವ್ಯಾಯಾಮ ಅಥವಾ ವಾಕಿಂಗ್ ಮಾಡಬೇಕು.
ಹೆಚ್ಚು ವಾಕಿಂಗ್ ಮಾಡುವುದರಿಂದ ಗರ್ಭಿಣಿಯರಿಗೆ ಆಯಾಸ, ಸುಸ್ತು ಕಾಡುತ್ತದೆ. ಆ ಸಮಯದಲ್ಲಿ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಹೆಚ್ಚು ವಾಕ್ ಮಾಡೋದ್ರಿಂದ ಫೆಲ್ವಿಕ್ ಮೇಲೆ ಒತ್ತಡ ಬೀಳುತ್ತದೆ. ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ತೊಡೆ ಹಾಗೂ ಪಾದದ ನೋವು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೀಲು ನೋವು ಕೂಡ ಕೆಲ ಮಹಿಳೆಯರಿಗೆ ಕಾಡುವುದಿದೆ. ಹಾಗಾಗಿ ಪ್ರತಿದಿನ 30 ನಿಮಿಷಗಳ ಕಾಲ ಮಾತ್ರ ನೀವು ನಡೆಯಬೇಕು.
ಗರ್ಭ ಧರಿಸುವ ಮೊದಲೇ ವ್ಯಾಯಾಮ ಮಾಡ್ತಿದ್ದ ಮಹಿಳೆಯರು ಗರ್ಭ ಧರಿಸಿದ ಮೇಲೆ ವಾರದಲ್ಲಿ ಕನಿಷ್ಠ 150 ನಿಮಿಷ ವ್ಯಾಯಾಮ ಮಾಡಬೇಕು. ಗರ್ಭ ಧರಿಸಿದ ನಂತ್ರ ವ್ಯಾಯಾಮ ಶುರು ಮಾಡಿದ್ದವರು ಕಡಿಮೆ ಪ್ರಮಾಣದಲ್ಲಿ ವ್ಯಾಯಾಮ ಮಾಡಬೇಕು.
ವಾಕಿಂಗ್ ಮಾಡುವ ಗರ್ಭಿಣಿಯರು ಆರಾಮದಾಯಕ ಶೂ ಬಳಸಬೇಕು. ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಆರೋಗ್ಯಕರ ಆಹಾರ ತೆಗೆದುಕೊಳ್ಳಬೇಕು. ನೇರವಾಗಿ ನಡೆಯಬೇಕು.