ತಾಯಿಯಾಗುವುದು ಮಹಿಳೆಗೆ ಅತ್ಯಂತ ಖುಷಿ ವಿಷ್ಯ. ಆದ್ರೆ ಕೆಲವೊಮ್ಮೆ ಅನಗತ್ಯ ಗರ್ಭಧಾರಣೆ ಮಹಿಳೆಯರನ್ನು ಸಂಕಷ್ಟಕ್ಕೆ ನೂಕುತ್ತದೆ. ಮಗು ಬೇಡ ಎಂಬ ನಿರ್ಧಾರಕ್ಕೆ ಬಂದವರಿಗೆ ಗರ್ಭ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ಗರ್ಭಪಾತಕ್ಕೆ ಮುಂದಾಗ್ತಾರೆ. ಆದರೆ ಗರ್ಭಪಾತ ಮಾತ್ರೆ ಆರೋಗ್ಯಕ್ಕೆ ಹಾನಿಕರ.
ಇದು ಭವಿಷ್ಯದಲ್ಲಿ ತಾಯಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಗರ್ಭಪಾತ ಮಾತ್ರೆಗಳು ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ಪ್ರಿಸ್ಕ್ರಿಪ್ಷನ್ ಇಲ್ಲದೆ ಈ ಮಾತ್ರೆಗಳನ್ನು ಮಾರಾಟ ಮಾಡುವುದು ಮತ್ತು ಖರೀದಿಸುವುದು ಅಪರಾಧವಾಗಿದ್ದರೂ, ಈ ಮಾತ್ರೆಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ನಗರಗಳಲ್ಲಿ ವಾಸಿಸುವ ವಿದ್ಯಾವಂತ ಮಹಿಳೆಯರು ಇದನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.
ಆಕಸ್ಮಿಕವಾಗಿ ಗರ್ಭಿಣಿಯಾಗಿದ್ದರೆ, ಗರ್ಭಪಾತ ಔಷಧವನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಇದಕ್ಕೂ ಮೊದಲು ಅಲ್ಟ್ರಾಸೌಂಡ್ ಮಾಡಿಸಬೇಕು. ನಂತ್ರ ವೈದ್ಯರು ನೀಡಿದಂತೆ ಮಾತ್ರೆ ಸೇವನೆ ಮಾಡಬೇಕು.
ಅನೇಕ ಬಾರಿ ಮಾತ್ರೆ ತೆಗೆದುಕೊಂಡ ನಂತ್ರವೂ ಭ್ರೂಣ ಸಂಪೂರ್ಣವಾಗಿ ಹೊರ ಬರುವುದಿಲ್ಲ. ಆಗ ಶಸ್ತ್ರಚಿಕಿತ್ಸೆಯ ಅಗತ್ಯವೂ ಇರುತ್ತದೆ. ಹಾಗಾಗಿ ಮಾತ್ರೆ ಸೇವನೆ ಮೊದಲು ವೈದ್ಯರನ್ನು ಸಂಪರ್ಕಿಸಿ.
ಗರ್ಭ ಧರಿಸಿದ 50 ದಿನಗಳೊಳಗೆ ತೆಗೆದುಕೊಳ್ಳಬೇಕು. ಮೂರು, ನಾಲ್ಕು ತಿಂಗಳ ನಂತ್ರ ಮಾತ್ರೆ ತೆಗೆದುಕೊಳ್ಳಬಾರದು. ಇದರಿಂದಾಗಿ ರಕ್ತಸ್ರಾವ ಹೆಚ್ಚಾಗುತ್ತದೆ. ಸೋಂಕಿನ ಅಪಾಯವೂ ಹೆಚ್ಚಾಗುತ್ತದೆ.
ಗರ್ಭಪಾತ ಮಾತ್ರೆಗಳು ಹೊಟ್ಟೆ ನೋವು ಮತ್ತು ಸೆಳೆತಕ್ಕೆ ಕಾರಣವಾಗುತ್ತದೆ. ದೇಹ ನಿರಂತರವಾಗಿ ಹೆಚ್ಚಿನ ಪ್ರಮಾಣದ ರಕ್ತ ಮತ್ತು ಇತರ ದ್ರವಗಳನ್ನು ಬಿಡುಗಡೆ ಮಾಡುವುದ್ರಿಂದ ಹೊಟ್ಟೆ, ಕಾಲುಗಳು ಮತ್ತು ದೇಹದ ಅನೇಕ ಭಾಗಗಳಲ್ಲಿ ಸೆಳೆತದ ಅನುಭವವಾಗುತ್ತದೆ.
ಈ ಔಷಧಿಯ ಬಳಕೆಯಿಂದ ವಾಕರಿಕೆ ಮತ್ತು ವಾಂತಿ ಕೂಡ ಉಂಟಾಗಬಹುದು. ಕೆಲವೊಮ್ಮೆ ಇದು ಕಿಬ್ಬೊಟ್ಟೆಯ ಸೆಳೆತ ಮತ್ತು ಅತಿಸಾರಕ್ಕೂ ಕಾರಣವಾಗಬಹುದು. ದೇಹವನ್ನು ದುರ್ಬಲಗೊಳಿಸಿ, ನಿಶಕ್ತಿಗೆ ಕಾರಣವಾಗುತ್ತದೆ. ಅತಿಯಾದ ರಕ್ತಸ್ರಾವದಿಂದಾಗಿ ದೇಹದಲ್ಲಿ ರಕ್ತದ ಕೊರತೆ ಎದುರಾಗಬಹುದು. ಯಾವುದೇ ಸಮಸ್ಯೆ ಕಂಡು ಬಂದ್ರೂ ತಕ್ಷಣ ವೈದ್ಯರನ್ನು ಭೇಟಿಯಾಗಿ.