ಬೆಂಗಳೂರು: ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಮಿತಿ ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ. ಅತಿಥಿ ಉಪನ್ಯಾಸಕರು ಮುಷ್ಕರ ಹಿಂಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ನೇರವಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲು ಸಾಧ್ಯವಿಲ್ಲ. ಕೊರೋನಾ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ಸರ್ಕಾರ ವೇತನ ನೀಡಿದೆ. ಮುಷ್ಕರ ಕೈಬಿಟ್ಟು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಗತಿಗಳಿಗೆ ಹಾಜರಾಗಬೇಕು ಎಂದು ಅತಿಥಿ ಉಪನ್ಯಾಸಕರಿಗೆ ಸಚಿವರು ಮನವಿ ಮಾಡಿದ್ದಾರೆ.
ಇನ್ನು ಇದೇ ವೇಳೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ. ರಾಜ್ಯದ 440 ಪ್ರಥಮದರ್ಜೆ ಕಾಲೇಜುಗಳಲ್ಲಿ 14,183 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೇಡಿಕೆ ದುಬಾರಿಯಾದುದಲ್ಲ. ಸರ್ಕಾರ ಈಗ ನೀಡುತ್ತಿರುವ ಅನುದಾನಕ್ಕೆ 200ಕೋಟಿ ರೂ. ಹೆಚ್ಚಿಗೆ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸಿದ್ದಾರೆ.
ಸಂಕಷ್ಟದಿಂದಾಗಿ ಅನೇಕ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗದೆ ಅನೇಕರು ಮೃತಪಟ್ಟಿದ್ದಾರೆ. ಅವರನ್ನು ಮತ್ತಷ್ಟು ಶೋಷಣೆ ಮಾಡದೆ ಅವರ ಬೇಡಿಕೆ ಈಡೇರಿಸಿ, ತರಗತಿಗೆ ಹಾಜರಾಗಲು ಕ್ರಮಕೈಗೊಳ್ಳಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.