ವಿಜಯಪುರ: ನಡೆದಾಡುವ ದೇವರು, ಜ್ಞಾನ ಯೋಗಿ ಎಂದೇ ಖ್ಯಾತರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಲಿಂಗೈಕ್ಯಕ್ಕೆ ಇಡೀ ರಾಜ್ಯವೇ ಕಣ್ಣೀರಾಕುತ್ತಿದೆ. ಸರಳ ಜೀವನ, ಬಡವರ ಒಳಿತು ಬಯಸುತ್ತಲೇ ತಾವಂದುಕೊಂಡ ಹಾಗೆ ಬದುಕಿ ಮತ್ತೊಬ್ಬರಿಗೆ ಮಾದರಿಯಾದ ಶ್ರೀಗಳು ಇನ್ನೂ ನೆನಪು ಮಾತ್ರ. ಈ ಶ್ರೀಗಳ ಅಗಲಿಕೆ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.
ಸ್ವಾಮೀಜಿ ಜೊತೆಗಿನ ಬಾಂದವ್ಯದ ಬಗ್ಗೆ 90 ರ ಅಜ್ಜ ಮಾತನಾಡಿದ್ದು, ಕಣ್ಣೀರು ಹಾಕಿದ್ದಾರೆ. ಹೌದು, ಬಾಗಲಕೋಟೆಯ ಜಮಖಂಡಿ ತಾಲೂಕಿನ ಹೊಳೆ ಹಿಪ್ಪರಗಿ ಮೂಲದ ವೀರಪ್ಪ ಎಂಬ 90 ವರ್ಷದ ಅಜ್ಜ ಮೂಲತಃ ಪುಸ್ತಕ ವ್ಯಾಪಾರಿ. ಇವರ ಹಾಗೂ ಸ್ವಾಮೀಜಿಯ ನಂಟು 30 ವರ್ಷಗಳದ್ದು. ಸಿದ್ದೇಶ್ವರ ಶ್ರೀ ಜೊತೆ ಒಡನಾಟ ಹೊಂದಿದ್ದವರಲ್ಲಿ ಇವರು ಕೂಡ ಒಬ್ಬರಂತೆ. ಪುಸ್ತಕ ಮಾರಾಟ ಮಾಡಲು ಬಂದರೆ ಬೇರೆ ಕಡೆ ಹೋಗಿ ಸಂಜೆ ವೇಳೆಗೆ ಆಶ್ರಮದಲ್ಲಿ ಬಂದು ಉಳಿದುಕೊಳ್ಳುತ್ತಿದ್ದರಂತೆ.
ಈ ಬಗ್ಗೆ ಮಾತನಾಡಿರುವ ಅವರು, ದೂರದ ಊರಿಂದ ಬಂದಿದ್ದೀಯಾ. ಆಶ್ರಮದಲ್ಲಿ ಪ್ರಸಾದ ಇದೆ ಮಾಡು ಎಂದು ಹೇಳುತ್ತಿದ್ದರು. ನಾನು ಚಿಕ್ಕವನಿಂದಲೂ ಇಲ್ಲಿಗೆ ಬರ್ತಾ ಇದ್ದೆ, ಆಗಿನಿಂದಲೂ ಶ್ರೀಗಳನ್ನ ನೋಡಿಕೊಂಡೇ ಬೆಳೆದಿದ್ದೀನಿ. ನನಗೆ ಈ ವಿಚಾರ ನಿನ್ನೆ ಗೊತ್ತಾಯಿತು. ನಮ್ಮ ಮನೆಯ ಅಂಗಳದ ಕಟ್ಟೆಯ ಮೇಲೆ ಕುಂತಾಗ ವಿಷಯ ಗೊತ್ತಾಯಿತು. ಕೂಡಲೇ ಅಲ್ಲಿಂದ ಹೊರಟೆ. ಮನೆಯವರಿಗೆ ಗೊತ್ತಿಲ್ಲ ನಾನು ಇಲ್ಲಿ ಬಂದಿರೋದು ಎನ್ನುತ್ತಾ ಕಣ್ಣೀರು ಹಾಕಿದ್ದಾರೆ ವೃದ್ಧ ವೀರಪ್ಪ.