ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಗೆ ಬಿ.ಎಲ್.ಡಿ.ಇ. ಸಂಸ್ಥೆಯ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ.
ವೈದ್ಯರಾದ ಡಾ. ಮಲ್ಲಣ್ಣ ಮೂಲಿಮನಿ. ಡಾ. ಅರವಿಂದ ಪಾಟೀಲ್, ಡಾ.ಎಸ್.ಬಿ. ಪಾಟೀಲ್ ನೇತೃತ್ವದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳಿಗೆ ಚಿಕಿತ್ಸೆ ನೀಡಿದ ನಂತರ ವೈದ್ಯರ ತಂಡದಿಂದ ಮಾಹಿತಿ ನೀಡಲಾಗಿದ್ದು, ಶ್ರೀಗಳು ಎಂದಿನಂತೆ ಆಹಾರ ಸೇವನೆ ಮಾಡುತ್ತಿದ್ದಾರೆ. ಅವರ ಪಲ್ಸ್ ರೇಟ್, ಬಿಪಿ ಸಹಜವಾಗಿದೆ. ಯಾರೂ ಸುಳ್ಳು ವದಂತಿಗೆ ಕಿವಿ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ನಾಳೆಯಿಂದ ಆನ್ಲೈನ್ ಮೂಲಕ ಸ್ವಾಮೀಜಿ ಭಕ್ತರಿಗೆ ದರ್ಶನ ನೀಡಲಿದ್ದಾರೆ. ಸ್ವಾಮೀಜಿಗಳ ಆರೋಗ್ಯ ಕುರಿತ ವದಂತಿಗಳ ಬಗ್ಗೆ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿ, ನಾಳೆಯಿಂದ ಆನ್ಲೈನ್ ನಲ್ಲಿ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವದಂತಿಗಳನ್ನು ನಂಬಬೇಡಿ ಎಂದು ತಿಳಿಸಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿದ್ದು, ಶುಕ್ರವಾರ ಅಪಾರ ಸಂಖ್ಯೆಯ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಮೊದಲ ಮಹಡಿಯಲ್ಲಿ ವೀಲ್ ಚೇರ್ ನಲ್ಲಿ ಕುಳಿತುಕೊಂಡು ಸ್ವಾಮೀಜಿ ಕೆಲ ಸಮಯ ದರ್ಶನ ನೀಡಿದ್ದಾರೆ. ನಾಳೆಯಿಂದ ದರ್ಶನಕ್ಕೆ ಬರದಂತೆ ಭಕ್ತರಿಗೆ ಮನವಿ ಮಾಡಲಾಗಿದೆ. ಆನ್ಲೈನ್ ನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.