ವಿಜಯಪುರ: ನಿನ್ನೆ ಸಂಜೆ ಶಿವೈಕ್ಯರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆಗೆ ಮುನ್ನ ಗುರುಗಳಾದ ಮಲ್ಲಿಕಾರ್ಜುನ ಶಿವಯೋಗಿ ಸ್ವಾಮೀಜಿ ಗದ್ದುಗೆ ಬಳಿ ಪೂಜೆ ನೆರವೇರಿಸಲಾಗಿದೆ.
ಮೆರವಣಿಗೆಯ ಮೂಲಕ ಶ್ರೀಗಳ ಪಾರ್ಥಿವ ಶರೀರವನ್ನು ಜ್ಞಾನಾಶ್ರಮಕ್ಕೆ ತರಲಾಗಿದ್ದು, ಅಂತ್ಯಕ್ರಿಯೆಯಲ್ಲಿ ಗಣ್ಯರು, ಸ್ವಾಮೀಜಿಗಳು ಭಾಗಿಯಾಗಿದ್ದಾರೆ. ಜಾಗದ ಕೊರತೆ ಹಿನ್ನೆಲೆಯಲ್ಲಿ ಜನರಿಗೆ ಅವಕಾಶ ನೀಡಲಾಗಿಲ್ಲ. 400 ಸ್ವಾಮೀಜಿಗಳು, 350 ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಆಶ್ರಮದ ಹೊರಗೆ ಡಿಜಿಟಲ್ ಸ್ಕ್ರೀನ್ ಅಳವಡಿಸಿ ಭಕ್ತರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಅಂತ್ಯಕ್ರಿಯೆಯಲ್ಲಿ ಕೇವಲ ಒಂದು ಸಾವಿರ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಶ್ರೀಗಳ ಅಂತಿಮ ಯಾತ್ರೆ ಯೋಗಾಶ್ರಮ ತಲುಪಿದ ನಂತರ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆ ಬಳಿ ಶ್ರೀಗಳ ಪಾರ್ಥಿವ ಶರೀರಕ್ಕೆ ಪೂಜೆ ನೆರವೇರಿಸಲಾಗಿದೆ.
ಅಂತ್ಯಕ್ರಿಯೆಯಲ್ಲಿ ಸುತ್ತೂರು ಸ್ವಾಮೀಜಿ, ಸಿರಿಗೆರೆ ಸ್ವಾಮೀಜಿ, ನಿರ್ಭಯಾನಂದ ಸ್ವಾಮೀಜಿ, ವಚನಾನಂದ ಶ್ರೀಗಳು, ವೀರೇಶಾನಂದ ಸ್ವಾಮೀಜಿ, ಮಹೇಶ್ವರಾನಂದ ಸ್ವಾಮೀಜಿ, ಸಂಗನಬಸವ ಶ್ರೀಗಳು, ಕುಂಟೋಜಿ ಚೆನ್ನವೀರ ದೇವರು, ಚೆನ್ನಬಸವ ಲಿಂಗ ಪಟ್ಟದೇವರು, ಅಭಿನವ ಸಂಗನಬಸವ ಸ್ವಾಮೀಜಿ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಸ್ವಾಮೀಜಿಗಳು ಭಾಗಿಯಾಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ ಹಾಗೂ ಶಾಸಕರಾದ ಎಂ.ಬಿ. ಪಾಟೀಲ್, ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.