ಬೆಂಗಳೂರು: ವಾಲ್ಮಿಕಿ ನಗಮದಲ್ಲಿ ಹಗರಣ ಪ್ರಕರಣ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿದ್ದು, ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ನಡುವೆ ಜಟಾಪಟಿಗೆ ಕಾರಣವಾದ ಘಟನೆ ನಡೆಯಿತು.
ವಿಧಾನಸಭೆಗೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ವಿಪಕ್ಷ ಸದಸ್ಯರು ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಉತ್ತರಿಸುವಂತೆ ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯಿಂದ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ ಎಂದರು. ಈ ವೇಳೆ ಎದ್ದು ನಿಂತ ಶಾಸಕ ಅಶ್ವತ್ಥನಾರಾಯಣ, ಏರುಧ್ವನಿಯಲ್ಲಿ ಪೇ ಸಿಎಂ, 100% ಸಿಎಂ ಎಂದು ವಾಗ್ದಾಳಿ ನಡೆಸಿದರು.
ನಿಮ್ಮದೆಲ್ಲ ಹಗರಣವನ್ನು ಈಗ ಬಯಲು ಮಾಡಬೇಕಾಗುತ್ತದೆ ಎಂದು ಸಿಎಂ ಗುಡುಗಿದರು. ಇದೇ ವೇಳೆ ಬಿಜೆಪಿ ಸದಸ್ಯರು ಭ್ರಷ್ಟ ಮುಖ್ಯಮಂತ್ರಿ ಎಂದು ಕೂಗಲಾರಂಭಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಶಾಸಕ ಅಶ್ವತ್ಥನಾರಾಯಣ್ ಅವರಿಗೆ ನೀನು ಭ್ರಷ್ಟಾಚಾರದ ಪಿತಾಮಹ ಎಂದರು.
ಇದೇ ವೇಳೆ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಇದರಿಂದ ಗರಂ ಆದ ಸಿಎಂ ಸಿದ್ದರಾಮಯ್ಯ ಅವಮಾನ ಮಾಡುತ್ತಿದ್ದಾರೆ. ಮಾತನಾಡಲು ಬಿಡುತ್ತಿಲ್ಲ ಬಿಜೆಪಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದರು.ಇದೇ ವೇಳೆ ಸಚಿವರಾದ ಕೃಷ್ಣಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್, ಮೊದಲು ಶಾಸಕ ಅಶ್ವತ್ಥನಾರಾಯಣ ಅವರನ್ನು ಸದನದಿಂದ ಹೊರಹಾಕುವಂತೆ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್, ವಿಪಕ್ಷ ನಾಯಕರನ್ನು ಸುಮ್ಮನೆ ಕುಳಿತುಕೊಳ್ಳುವಂತೆ ಸೂಚಿಸಿದರು.