ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ವಿಚಾರವಾಗಿ ಮೊದಲ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇದನ್ನು ನಾನು ಮೊದಲೇ ನಿರೀಕ್ಷಿಸಿದ್ದೆ. ದೂರು ನೀಡಿದ ದಿನವೇ ನನಗೆ ಶೋಕಾಸ್ ನೋಟಿಸ್ ಕೊಟ್ಟಿದ್ದರು. ಆಗಲೇ ನಿರೀಕ್ಷೆ ಇತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಹೆಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ, ಮುರುಗೇಶ್ ನಿರಾಣಿ ವಿರುದ್ಧ ಕೇಸ್ ಗೆ ಅನುಮತಿ ನೀಡದೇ ಈಗ ಏಕಾಏಕಿ ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅದರ ಅರ್ಥ ದಿಒಡ್ಡ ಷಡ್ಯಂತ್ರದಿಂದ ನನ್ನ ವಿರುದ್ಧ ಈ ರೀತಿ ಮಾಡಲಾಗಿದೆ ಎಂದರು.
ರಾಜ್ಯಪಾಲರ ಕ್ರಮದ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಅಂತಹ ಪ್ರಮೇಯ ಬರಲ್ಲ. ಹೈಕಮಾಂಡ್, ಸಚಿವರು, ಶಾಸಕರು ಎಲ್ಲರೂ ನನ್ನ ಜೊತೆಗಿದ್ದಾರೆ. ಎಲ್ಲಾ ನಾಯಕರ ಬೆಂಬಲವಿದೆ ಎಂದು ಹೇಳಿದರು.